ಸಾಗರ: ತಾಲೂಕಿನ ಹತ್ತಿಸರ ಗ್ರಾಮದಲ್ಲಿ ಕಡಜದ ಹುಳು ಕಚ್ಚಿದ ಪರಿಣಾಮ 8 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ನಿಷ್ಮಿತ್ ಎಂದು ಗುರುತಿಸಲಾಗಿದೆ.
ನಿಷ್ಮಿತ್ ಹತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಅವರ ಪುತ್ರನಾಗಿದ್ದು, ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮನೆಯ ಹಿತ್ತಲಿನಲ್ಲಿದ್ದ ಬಾಳೆ ಗಿಡದ ಬಳಿ ಇದ್ದ ಕಡಜದ ಗೂಡಿನಿಂದ ಏಕಾಏಕಿ ಹುಳುಗಳು ದಾಳಿ ನಡೆಸಿದ ವೇಳೆ ನಿಷ್ಮಿತ್ ಹಾಗೂ ಆತನ ತಂದೆಗೆ ಕಡಿತವಾಗಿದೆ ಎಂದು ತಿಳಿದುಬಂದಿದೆ.

ಹುಳು ಕಚ್ಚಿದ ತಕ್ಷಣ ಬಾಲಕ ಅಸ್ವಸ್ಥಗೊಂಡಿದ್ದರಿಂದ ಮೊದಲು ಸಮೀಪದ ಹೆಗ್ಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ.
ಈ ಘಟನೆ ವೇಳೆ ನಿಷ್ಮಿತ್ ತಂದೆ ವೆಂಕಟೇಶ್ ಅವರಿಗೂ ಕಡಜದ ಹುಳುಗಳು ಕಚ್ಚಿದ್ದು, ಅವರು ಕೂಡ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ನಿಷ್ಮಿತ್ ಎರಡನೇ ತರಗತಿಯಲ್ಲಿ ಓದುತ್ತಿದ್ದ ಚುರುಕು ಬಾಲಕನಾಗಿದ್ದನು. ಆತನ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಳವಾದ ದುಃಖ ಆವರಿಸಿದೆ.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

