HOSANAGAR ; ದಿನದಿಂದ ದಿನಕ್ಕೆ ಭತ್ತ ನಾಟಿ ಮಾಡುವ ಪ್ರದೇಶವು ಕುಂಠಿತಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಇದು ಅನ್ನದ ಸಮಸ್ಯೆಗೆ ಕಾರಣ ಆಗಲೂ ಬಹುದು. ನಷ್ಟವಾದರೂ ಹೆಚ್ಚಿನ ರೈತಾಪಿವರ್ಗ ಭತ್ತದ ಕೃಷಿಯತ್ತ ಮನಸ್ಸು ಮಾಡುತ್ತಿರುವುದು ಆಶಾದಯಕ ಬೆಳವಣಿಗೆ ಆಗಿದೆ ಎಂದು ಶಿವಮೊಗ್ಗ ಜಿಲ್ಲಾ ಕೃಷಿ ವಿಜ್ಞಾನ ಕಾಲೇಜಿನ ಕೀಟ ಶಾಸ್ತ್ರಜ್ಞ ಡಾ. ಗಿರೀಶ್ ತಿಳಿಸಿದರು.
ದೊಂಬೆಕೊಪ್ಪದ ಸಾರಾ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸಾರಾ ಸಂಸ್ಥೆ ಆವರಣದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಭತ್ತದ ಕ್ಷೇತ್ರೋತ್ಸವ ಮತ್ತು ರೈತ ವಿಜ್ಞಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭತ್ತ ಶೇ.100 ಯಾಂತ್ರೀಕೃತ ಬೆಳೆಯಾಗಿದೆ. ಭತ್ತದ ಸಸಿಯ ಮಡಿ ನಿರ್ಮಾಣದಿಂದ ಆರಂಭಗೊಂಡು ಭತ್ತದ ಬೆಳೆ ಕಟಾವಿನವರೆಗೂ ಯಂತ್ರದ ಬಳಕೆ ಮಾಡಬಹುದಾಗಿದೆ. ಅಲ್ಲದೆ, ಭತ್ತದ ವಿನಃ ಇನ್ಯಾವುದೇ ಬೆಳೆ ಇಷ್ಟೊಂದು ಯಾಂತ್ರೀಕೃತವಾಗಿಲ್ಲ. ಆದುದರಿಂದ ಭತ್ತದ ಕೃಷಿಗೆ ಕೂಲಿಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಜೊತೆಗೆ ಭತ್ತ ಕೃಷಿಯಲ್ಲಿ ಇಳುವರಿ ಸಮಸ್ಯೆ ರೈತಾಪಿ ವರ್ಗವನ್ನು ಬೆಂಬಿಡದೆ ಕಾಡುತ್ತಿದೆ. ಉತ್ತಮ ಕೃಷಿಭೂಮಿಯಲ್ಲಿ ಒಂದು ಎಕರೆಗೆ 30ಕ್ಕೂ ಹೆಚ್ಚು ಕ್ವಿಂಟಾಲ್ ಭತ್ತದ ನಿರೀಕ್ಷೆ ಇಲಾಖೆಯದ್ದು ಆದರೆ, ಮಲೆನಾಡಿನಲ್ಲಿ ಇದು ಎಕರೆಗೆ 15 ಕ್ವಿಂಟಾಲ್ ದಾಟದು ಎಂಬುವುದೇ ಸೋಜಿಗ ಸಂಗತಿ ಆಗಿದೆ. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆಯು ಭತ್ತದ ಕೃಷಿ ಕುರಿತು ರೈತರಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ, ಔಷಧೋಪಚಾರ ಬಗ್ಗೆ ಸಮಗ್ರ ಮಾಹಿತಿ ನೀಡುತ್ತ ಬಂದಿದೆ.
ಸ್ಥಳೀಯ ಸಾರ ಸಂಸ್ಥೆಯು ಸುಮಾರು 400ಕ್ಕೂ ಹೆಚ್ಚು ವಿವಿಧ ಭತ್ತದ ತಳಿಯ ಬೀಜೋಪಚಾರ- ಸಂಸ್ಕರಣೆಗೆ ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದರು.
ಸರಕಾರಗಳಿಗೆ ಸವಾಲಾಗಿರುವ ವಿವಿಧ ಭತ್ತದ ಬೀಜಗಳ ಸಂಸ್ಕರಣೆಗೆ ರೈತರೇ ಆಸಕ್ತಿ ವಹಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯದಲ್ಲಿ ನಿರತವಾಗಿರುವುದು ಸಂತೋಷದ ವಿಷಯ ಆಗಿದೆ ಎಂದರು.
ವಿಶ್ವದಲ್ಲಿ ಒಟ್ಟಾರೆ ಒಂದು ಲಕ್ಷಕ್ಕೂ ಹೆಚ್ಚಿನ ವಿವಿಧ ಮಾದರಿ ಭತ್ತದ ತಳಿಗಳಿದ್ದು, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಒಂದರಲ್ಲೇ ಸುಮಾರು 1200 ಮಾದರಿಯ ವಿವಿಧ ಭತ್ತದ ಬೀಜಗಳ ತಳಿಯ ಸಂಸ್ಕರಣೆ ಸಂಗ್ರಹವಾಗಿದೆ. ಭತ್ತದ ಸಂಶೋಧನೆ ಕೇಂದ್ರಗಳ ಮೂಲಕ ಆಹಾರ ಉತ್ಪಾದನೆಗೆ ಸಹಕಾರಿಯಾಗಲು ವಿವಿಧ ಭತ್ತದ ತಳಿಯ ಬೀಜೋತ್ಪಾದನೆ ಮಾಡಿ ರೈತರಿಗೆ ನೀಡುವ ಮೂಲಕ ಭತ್ತದ ಕೃಷಿಗೆ ಇಲಾಖೆ ನೆರವಾಗುತ್ತಿದೆ ಎಂದರು.
ಬೀಜೋತ್ಪಾದನೆ ಬಹಳ ದೊಡ್ಡ ಸಮಸ್ಯೆ ಆಗಿರಲು ಕಾರಣ ಸ್ಥಳಾವಕಾಶದ ಕೊರತೆ. ಆ ಕಾರಣಕ್ಕೆ ಮೂರ‍್ನಾಲ್ಕು ವರ್ಷಗಳಿಗೊಮ್ಮೆ ವಿವಿಧ ಭತ್ತದ ತಳಿಯ ಬೀಜೋತ್ಪಾದನೆಗೆ ಕೃಷಿ ಇಲಾಖೆ ಮುಂದಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಸಣ್ಣ ಭತ್ತದ ತಳಿಯಾದ, ಹೆಚ್ಚಿನ ಇಳುವರಿ ನೀಡುವ ‘ಸಹ್ಯಾದ್ರಿ ಕೆಂಪು ಮುಕ್ತ’ ಹಾಗು ‘ಸಹ್ಯಾದ್ರಿ ಸಿರಿ’ ಎರಡು ಬಗೆಯ ಭತ್ತದ ತಳಿ ಬೀಜಗಳು ರೈತರ ಕೈಸೇರಿವೆ ಎಂದರು.
ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯ ಕಾರಣ ಭೂಮಿಯ ಲವಣಾಂಶ ಕಡಿಮೆ ಆಗುತ್ತದೆ. ಆಮ್ಲದ ಪ್ರಮಾಣ ಹೆಚ್ಚಿರುವ ಕಾರಣ ಕೃಷಿಯಲ್ಲಿನ ಇಳುವರಿ ಕಡಿಮೆ ಆಗಲು ಕಾರಣವು ಆಗಿದೆ. ಆ ಕಾರಣಕ್ಕೆ ಪಿಹೆಚ್ ಬೆಲೆ ನಿಗದಿತ ಪಡಿಸಿಕೊಳ್ಳಬೇಕೆಂದು ರೈತರಿಗೆ ಸಲಹೆ ನೀಡಿದರು.
ಈ ವೇಳೆ ಹಲವು ರೈತರು ಹಾಗು ಕೃಷಿ ತಜ್ಞರ ನಡುವೆ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊಸನಗರ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ, ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕಿ ಮಂಗಳ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಮಂಜುನಾಥ ಇದ್ದರು. ಸಾರಾ ಸಂಸ್ಥೆ ಸಂಸ್ಥಾಪಕ ಅರುಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಸಾರಾ ಸಂಸ್ಥೆಯ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಶಿವಕುಮಾರ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಅಡಿಕೆ ಮತ್ತು ಭತ್ತದ ಮಣ್ಣು ಫಲವತ್ತತೆ ಕುರಿತು ಸಾರಾ ಸಂಸ್ಥೆಯ ಧನಿಷ್ ಕುಮಾರ್ ರೈತಾಪಿಗಳಿಗೆ ಸ್ಲೈಡ್ ಶೋ ನಡೆಸಿಕೊಟ್ಟರು. ಕಾರ್ಯಗಾರದಲ್ಲಿ ಹರತಾಳು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಿವಮೂರ್ತಿ, ಸದಸ್ಯ ರವಿ, ಕೃಷಿಕರಾದ ಮುಂಡಿಗೆಸರ ರಾಮಮೂರ್ತಿ, ಪೃಥ್ವಿರಾಜ್, ಕಚ್ಚಿಗೆಬೈಲು ಕೃಷ್ಣಮೂರ್ತಿ, ಆತನಾಡಿ ವಿಜೇಂದ್ರ, ಹೊಸನಾಡು ಕೆ.ಬಿ. ಲಿಂಗಪ್ಪ, ನಗರ ಶ್ರೀನಿವಾಸ್, ಮುರಳಿಧರ್, ಕೆ.ಎಸ್. ರವಿ, ಹೊಸಳ್ಳಿ ಪಂಚಾಕ್ಷರಿ, ಮುತ್ತಲ ಸತೀಶ್ ಹಂಜಾ, ಹಿರೇಜೇನಿ ಮಂಜುನಾಥ, ಕರ್ಕಿಕೊಪ್ಪ ರಾಮಚಂದ್ರ ಭಟ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.