ಹೊಸನಗರ: ಪ್ರಸಿದ್ಧ ಜೈನ ಧಾರ್ಮಿಕ ಕ್ಷೇತ್ರವಾದ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಮೂರನೇ ದಿನ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಲೋಕಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಶಾಸ್ತ್ರೋಕ್ತ ಪೂಜೆಗಳನ್ನು ಆಯೋಜಿಸಲಾಗಿತ್ತು.
ದಿನದ ಆರಂಭದಲ್ಲಿ ಕುಮುದ್ವತಿ ತೀರ್ಥದಿಂದ ರಜತ ಕಲಶದಲ್ಲಿ ಪವಿತ್ರ ಜಲವನ್ನು ತರಲಾಯಿತು. ಶ್ರೀ ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳದ ಶ್ರಾವಿಕೆಯರು ಹಾಗೂ ಭಕ್ತರು ವಾದ್ಯಗೋಷ್ಠಿಯೊಂದಿಗೆ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ದೇವರ ಸನ್ನಿಧಿಯಲ್ಲಿ ಷೋಡಶೋಪಚಾರ ಪೂಜಾ ವಿಧಿಗಳು ಜರುಗಿದವು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಹೊಂಬುಜ ಜೈನ ಮಠದ ಪೀಠಾಧಿಪತಿ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಭಕ್ತರು ಪೂಜಾ ವಿಧಿವಿಧಾನಗಳಲ್ಲಿ ಮನಸ್ಸು, ಮಾತು ಮತ್ತು ಕೃತಿಗಳ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿನನಾಮ ಸ್ಮರಣೆ ಹಾಗೂ ಸ್ತುತಿಗಳ ಪಠಣದಿಂದ ಅಂತರಂಗದಲ್ಲಿ ಸಕಾರಾತ್ಮಕ ಚೈತನ್ಯ ಮೂಡುತ್ತದೆ. ಧರ್ಮದ ಪ್ರಭಾವನೆ ಮತ್ತು ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಮಹತ್ವದ ಪಾತ್ರವಿದೆ ಎಂದು ಅವರು ಹೇಳಿದರು. ಆಧ್ಯಾತ್ಮಿಕ ಭಕ್ತಿಯ ಮೂಲಕ ಎಲ್ಲರಿಗೂ ಜ್ಞಾನ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುವ ಶುಭಫಲಗಳು ದೊರೆಯಲಿ ಎಂದು ಹಾರೈಸಿದರು.

ಬಣ್ಣಬಣ್ಣದ ಬಳೆಗಳಿಂದ ಅಲಂಕರಿಸಲ್ಪಟ್ಟ ಶ್ರೀ ಪದ್ಮಾವತಿ ದೇವಿಯ ಮೂರ್ತಿಯು ಭಕ್ತರ ಗಮನ ಸೆಳೆಯಿತು. ಪೂಜಾ ಸೇವೆ ಸಲ್ಲಿಸಿದ ಹುಬ್ಬಳ್ಳಿಯ ಭೂಮಿಕಾ ಎಸ್. ಸಾಂಗ್ಲಿ ಹಾಗೂ ಸಂತೋಷ ಬಿ. ಸಾಂಗ್ಲಿ ಅವರ ಕುಟುಂಬದವರನ್ನು ಸ್ವಾಮೀಜಿಯವರು ಗೌರವಿಸಿ ಆಶೀರ್ವದಿಸಿದರು.
ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಮತ್ತು ಶ್ರೀ ನಾಗ ಸನ್ನಿಧಿಗಳಲ್ಲಿಯೂ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆದವು.
ರಾತ್ರಿ ಅಷ್ಟಾವಧಾನಪೂರ್ವಕ ಪೂಜೆಯೊಂದಿಗೆ ನೃತ್ಯ, ವಾದ್ಯ ಮತ್ತು ಗದ್ಯ ಸೇವೆಗಳು ಜರುಗಿದವು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು.

