ಹೊಸನಗರ: ಮಳೆ ಕೊರತೆಯಿಂದ ಗ್ರಾಮದಲ್ಲಿ ಉಂಟಾಗಿರುವ ಒಣಹವೆಯನ್ನು ನಿವಾರಿಸಿ, ಉತ್ತಮ ಮಳೆ ಸುರಿಯಲಿ ಎಂಬ ಆಶಯದೊಂದಿಗೆ ನೆಲಗಳಲೆ ಗ್ರಾಮದ ವಿಜಾಪುರದ ಶ್ರೀ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ನೀರು ಹಿಡಿಯುವ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಒಂದಾಗಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದಲ್ಲಿ ಮಳೆಯಾಗಿ ತಂಪಾದ ವಾತಾವರಣ ನಿರ್ಮಾಣವಾಗಲಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಮಳೆ ಬಾರದೆ ಇರುವುದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕದಲ್ಲಿರುವ ಹಿನ್ನೆಲೆಯಲ್ಲಿ, ದೇವರ ಕೃಪೆಯಿಂದ ಉತ್ತಮ ಮಳೆ ಲಭಿಸಲಿ ಎಂಬ ಭಕ್ತಿಭಾವದಿಂದ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ, ವಿಜಾಪುರ ಹಾಗೂ ಗ್ರಾಮಸ್ಥರು ಸೇರಿ ನಡೆಸಿದರು.

