ಕಾರ್ಗಲ್: ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿಎಲ್) ಸ್ಥಾಪಿಸಲು ಉದ್ದೇಶಿಸಿರುವ 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕರು, ಇತಿಹಾಸ ತಜ್ಞರು ಹಾಗೂ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಕಾರ್ಗಲ್ನ ಕೆಪಿಸಿಎಲ್ ಆಫೀಷಿಯಲ್ಸ್ ರಿಕ್ರಿಯೇಶನ್ ಕ್ಲಬ್ ಆವರಣದಲ್ಲಿ ಶಿವಮೊಗ್ಗ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆಪಿಸಿಎಲ್ ಸಂಯುಕ್ತಾಶ್ರಯದಲ್ಲಿ ಪರಿಸರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಯೋಜನೆ ವಿರುದ್ಧ ಧ್ವನಿ ಎತ್ತಿದರು.
ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಯೋಜನೆಯ ಡಿಪಿಆರ್ ಇಂಗ್ಲಿಷಿನಲ್ಲಿ ಇದ್ದುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. “ಡಿಪಿಆರ್ ಅನ್ನು ಕನ್ನಡಕ್ಕೆ ಅನುವಾದಿಸಿ ಸಾರ್ವಜನಿಕರಿಗೆ ವಿತರಿಸದಿರುವುದು ತೊಂದರೆ ಉಂಟುಮಾಡಿದೆ. ಕನಿಷ್ಠ 45 ದಿನ ಮುಂದೂಡಿ, ನಂತರ ಮತ್ತೆ ಸಭೆ ನಡೆಸಬೇಕು” ಎಂದು ಒತ್ತಾಯಿಸಿದರು.
ಪ್ರಸ್ತಾವಿತ ಯೋಜನೆ ಪರಿಸರ, ಐತಿಹಾಸಿಕ ಸ್ಮಾರಕಗಳು, ಸ್ಥಳೀಯ ಜನ-ಜಾನುವಾರುಗಳಿಗೆ ಹಾನಿಕಾರಕವಾಗಲಿದೆ ಎಂದು ಹಲವು ವಕ್ತಾರರು ಆರೋಪಿಸಿದರು. “ಈ ಯೋಜನೆ ಸುಳ್ಳು ಭರವಸೆಗಳ ಸಂಕಲನ. ಸಾರ್ವಜನಿಕರಿಗೆ ಮೋಸ ಮಾಡುವ ಹಿಡನ್ ಅಜೆಂಡಾ ಅಡಗಿದೆ. ಈ ಸಭೆ ಕೇವಲ ಕಣ್ಣಿಗೆ ಮಣ್ಣೆರೆಚುವ ತಂತ್ರ” ಎಂದು ಟೀಕಿಸಿದರು. ದಟ್ಟಾರಣ್ಯದ ಕತ್ಲೆಕಾನು, ಐತಿಹಾಸಿಕ ಮಹತ್ವದ ಗೇರುಸೊಪ್ಪ, ನಗರಬಸ್ತಿಕೇರಿ ಮೊದಲಾದ ಸ್ಥಳಗಳು ನಾಶವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ, ಪರಿಸರವಾದಿಗಳಾದ ಪ್ರೊ. ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ಅನಂತ ಹೆಗಡೆ ಅಶೀಸರ, ಡಾ. ಎಲ್.ಕೆ. ಶ್ರೀಪತಿ, ಇತಿಹಾಸ ತಜ್ಞ ಡಾ. ಬಾಲಕೃಷ್ಣ ಹೆಗಡೆ, ಶಿವಾನಂದ ಕಳವೆ, ಮೊದಲಾದ ಮುಳುಗಡೆ ಸಂತ್ರಸ್ತರು ಮಾತನಾಡಿ ಯೋಜನೆಗೆ ಬಲವಾದ ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೆಪಿಸಿಎಲ್ ಅಧಿಕಾರಿ ವಿಜಯ್, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು ರಮೇಶ್ ನಾಯ್ಕ್ ಹಾಗೂ ಶಿಲ್ಪಾ, ಡಿಎಫ್ಒ ಪ್ರಸನ್ನ ಪಟಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಸಗುಂದ ಶಾಲೆ ಕಲಿಕೋಪಕರಣ ಖರೀದಿಗೆ ಧನ ಸಹಾಯ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650