ಶಿವಮೊಗ್ಗ: ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಸಾಧನೆ ಮಾಡಿ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಮಹಿಳೆಯರು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಪ್ರೇರಣ ಶಿಬಿರದ ಅಂಗವಾಗಿ ನಡೆದ “ಸಾಧಕ ಮಹಿಳೆಯರ ಸನ್ಮಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಆ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಸಾರ್ಥಕ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಕುಂತಲಾ ಚಂದ್ರಶೇಖರ್ ತಿಳಿಸಿದರು.
ಶಿಬಿರದ ನಾಯಕಿ ಮಲ್ಲೇಶ್ವರಿ ಜುಜಾರೆ ಮಾತನಾಡಿ, ಮಹಿಳೆಯರಿಗೆ ಸ್ಪೂರ್ತಿ ನೀಡುವುದು, ಅವರ ಪ್ರತಿಭೆ ಅನಾವರಣಗೊಳ್ಳಲು ವೇದಿಕೆ ಕಲ್ಪಿಸುವುದು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಕುರಿತು ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಕರೆ ನೀಡಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್ ಮಾತನಾಡಿ, ಮಹಿಳೆಯರು ಕೇವಲ ಮನೆಯೊಳಗಿನ ಜವಾಬ್ದಾರಿಗಳಿಗೆ ಮಾತ್ರ ಸೀಮಿತರಾಗದೆ, ವಿವಿಧ ಕ್ಷೇತ್ರಗಳು ಮತ್ತು ಉದ್ಯಮಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೈಗಾರಿಕಾ ಉದ್ಯಮಿ ಸಹನಾ ನಂದನ್ ಅವರ ಸಾಧನೆಯನ್ನು ಉಲ್ಲೇಖಿಸಿದ ಅವರು, ಕೈಗಾರಿಕೆ ಸ್ಥಾಪಿಸಿ 250ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿರುವುದು ದೊಡ್ಡ ಸಾಧನೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂಸ್ಥೆಯ ಗೌರವವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಿ ಕೆ. ರವಿ ಅವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ವಿಪತ್ತು ನಿರ್ವಹಣಾ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುಮಾರಿ ಸುಜಾತ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೆರೇಡ್ ಹಾಗೂ ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿರುವುದು ಸುಜಾತ ಅವರ ವಿಶೇಷ ಸಾಧನೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಎ.ವಿ. ರಾಜೇಶ್, ಎನ್.ಕೆ. ಕೃಷ್ಣಸ್ವಾಮಿ, ಸಹ ಕಾರ್ಯದರ್ಶಿ ವೈ.ಆರ್. ವಿರೇಶಪ್ಪ, ತರಬೇತಿ ಆಯುಕ್ತ ಹೆಚ್. ಶಿವಶಂಕರ್, ಮಲ್ಲಿಕಾರ್ಜುನ ಕಾನೂರ್, ಚಂದ್ರಶೇಖರ್ ಸೇರಿದಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

