ಶಿವಮೊಗ್ಗ : ಶಾಲಾ ಕಟ್ಟಡಕ್ಕೆ ಬೆಂಕಿ ಸುರಕ್ಷತಾ ಪ್ರಮಾಣಪತ್ರ (NOC) ನೀಡಲು ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್‌ಕುಮಾರ್ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದ ಹಿನ್ನೆಲೆ:
ಶಿಕಾರಿಪುರದ ಚನ್ನಕೇಶವ ನಗರದಲ್ಲಿ ‘ನಂದಗೋಕುಲ’ ಎಂಬ ಉಚಿತ ಶಾಲಾ ಕಟ್ಟಡ ನಿರ್ಮಿಸಿರುವ ಅನೂಪ್ ಎಂಬುವವರು, ಕಟ್ಟಡಕ್ಕೆ ಅಗ್ನಿಶಾಮಕ ಸುರಕ್ಷತಾ ಉಪಕರಣಗಳನ್ನು ಅಳವಡಿಸಿ ಎನ್‌ಒಸಿಗಾಗಿ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ ಅಧಿಕಾರಿ ಸತಾಯಿಸುತ್ತಾ ₹3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಸಂಧಾನ ನಡೆದು ₹1 ಲಕ್ಷ ನೀಡಲು ಮಾತುಕತೆಯಾಗಿತ್ತು. ಲಂಚ ನೀಡಲು ಇಷ್ಟವಿಲ್ಲದ ಅನೂಪ್ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಕಾರ್ಯಾಚರಣೆ ವಿವರ:
ಶಿವಮೊಗ್ಗದ ಅಗ್ನಿಶಾಮಕ ಕಚೇರಿಯಲ್ಲಿ ಅನೂಪ್ ಅವರಿಂದ ₹1 ಲಕ್ಷ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣದೊಂದಿಗೆ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಅಂತೋಣಿ ಜಾನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ವೀರಬಸಪ್ಪ, ರುದ್ರೇಶ ಅವರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

