ಶಿವಮೊಗ್ಗ: ನಕಲಿ ದಾಖಲೆಗಳು, ಸರ್ಕಾರಿ ಸ್ಟ್ಯಾಂಪ್ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ಸೃಷ್ಟಿಸಿ ವಂಚನೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17,000 ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ.
ಶಿವಮೊಗ್ಗ ನಗರದ ಎ.ಎನ್.ಕೆ. ರಸ್ತೆಯ ಗೋವಿಂದಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಇಮೇಜ್ ಟೆಕ್ನಾಲಜೀಸ್ ಎಂಬ ಕಂಪ್ಯೂಟರ್ ಅಂಗಡಿಯಲ್ಲಿ ವಿಷ್ಣುಭಕ್ತ ಎಂಬಾತ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಆರೋಪಿಯು ಮೋಸದ ಉದ್ದೇಶದಿಂದ ನಕಲಿ ದಾಖಲೆಗಳು, ಸರ್ಕಾರಿ ಸ್ಟ್ಯಾಂಪ್‌ಗಳು ಹಾಗೂ ಸರ್ಕಾರದ ವಿವಿಧ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ತಯಾರಿಸಿ, ಅವುಗಳನ್ನು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ ಸಲ್ಲಿಸುವ ಮೂಲಕ ಸರ್ಕಾರ ಮತ್ತು ಬ್ಯಾಂಕ್‌ಗಳಿಗೆ ಅಕ್ರಮ ನಷ್ಟ ಉಂಟುಮಾಡಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದನು.
ಈ ಕುರಿತು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 21/2021 ರಡಿ ಐಪಿಸಿ ಕಲಂ 255, 256, 258, 420, 465, 467, 468 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಯಾದ ಶಿವಮೊಗ್ಗ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳಿ ಅವರು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು 2026ರ ಆಗಸ್ಟ್ 12ರಂದು ಆರೋಪಿತನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.

