ಶಿವಮೊಗ್ಗ: ನಗರದ ಹೋಟೆಲ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳ ಮೇಲಿನ ತಪಾಸಣೆಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಮುಂದುವರಿಸಿದ್ದಾರೆ. ಮಂಗಳವಾರ ನಗರದ ನಾಲ್ಕು ಆಹಾರ ಮಳಿಗೆಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಸ್ವಚ್ಛತೆ, ಆಹಾರ ಸಂಗ್ರಹಣೆ ಮತ್ತು ಲೇಬಲಿಂಗ್‌ಗೆ ಸಂಬಂಧಿಸಿದ ಹಲವು ನ್ಯೂನತೆಗಳನ್ನು ಗುರುತಿಸಿದೆ.
ಅಧಿಕಾರಿ ಡಾ. ಮೈತ್ರಿ ನೇತೃತ್ವದ ತಂಡವು ತಾಜ್ ಹೋಟೆಲ್, ಬ್ರೈಟ್ ಹೋಟೆಲ್, ಲಕ್ಷ್ಮೀ ಕಾಂಡಿಮೆಂಟ್ಸ್ ಮತ್ತು ಹೋಳಿಗೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅವಧಿ ಮೀರಿದ ಹಾಲು ಪತ್ತೆ
ತಪಾಸಣೆ ಸಂದರ್ಭದಲ್ಲಿ ತಾಜ್ ಹೋಟೆಲ್‌ನಲ್ಲಿ ಅವಧಿ ಮೀರಿದ ಸುಮಾರು 15 ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಆಹಾರ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸದಿರುವುದು, ಸಿದ್ಧಪಡಿಸಿದ ಆಹಾರದ ಮೇಲೆ ತಯಾರಿಸಿದ ದಿನಾಂಕ ಮತ್ತು ಬಳಕೆಯ ಅವಧಿಯನ್ನು ನಮೂದಿಸದಿರುವುದು ಹಾಗೂ ಫ್ರೀಜರ್‌ನಲ್ಲಿ ಆಹಾರವನ್ನು ನಿಯಮಾನುಸಾರ ಇಡದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ ಎನ್ನಲಾಗಿದೆ.
ಅಡುಗೆಗೆ ಬಳಸುತ್ತಿದ್ದ ಸೋಡಾ ಪ್ಯಾಕೆಟ್‌ಗಳ ಮೇಲೆ ತಯಾರಿಕಾ ಸಂಸ್ಥೆಯ ಹೆಸರು ಮತ್ತು ಅವಧಿ ಮುಕ್ತಾಯದ ದಿನಾಂಕ ಇಲ್ಲದಿರುವುದನ್ನೂ ಅಧಿಕಾರಿಗಳು ಗಮನಿಸಿದ್ದಾರೆ. ಕೆಲವು ಅಡುಗೆ ಒಲೆಗಳ ಸಮೀಪ ಟೇಸ್ಟಿಂಗ್ ಪೌಡರ್ ಇರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ನ್ಯೂನತೆ ಸರಿಪಡಿಸಲು 15 ದಿನಗಳ ಗಡುವು
ತಾಜ್ ಮತ್ತು ಬ್ರೈಟ್ ಹೋಟೆಲ್‌ಗಳಲ್ಲಿ ಪ್ರಮುಖ ನ್ಯೂನತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ನಿಯಮಗಳನ್ನು ಪಾಲಿಸದಿದ್ದರೆ ಆಹಾರ ಪರವಾನಗಿ ರದ್ದುಗೊಳಿಸುವುದು ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವುದು, ಅವಧಿ ಮೀರಿದ ಉತ್ಪನ್ನಗಳನ್ನು ಬಳಸದಿರುವುದು ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆ ಕಾಪಾಡುವುದು ಕಡ್ಡಾಯವಾಗಿದೆ. ನಗರದ ಹೋಟೆಲ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳಲ್ಲಿ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

