ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯತಿ ಪಕ್ಕದಲ್ಲಿ ಸುಮಾರು ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಕೂಡಾ ಸಾರ್ವಜನಿಕರಿಗೆ ಉಪಯೋಗಕ್ಕಿಲ್ಲದೆ ಬಾಗಿಲಿಗೆ ಬೀಗ ಹಾಕಿದನ್ನು ತೆರೆಯದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದ್ದು ಈವರೆಗೂ ಹಾಕಿದ ಬೀಗ ತೆರೆಯದೆ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ.
ನಿತ್ಯ ಸುತ್ತಮುತ್ತಲಿನ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪಕ್ಕದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಬರುವ ಮಹಿಳೆಯರು, ವೃದ್ದರು ಸೇರಿದಂತೆ ಬಸ್ ಪ್ರಯಾಣಿಕರು ಶೌಚಾಲಯದ ಪಕ್ಕದ ಬಸ್ ನಿಲ್ದಾಣದಲ್ಲಿ ಪರದಾಡುವ ಸ್ಥಿತಿ ಕಂಡು ಕಾಣದವರಂತೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಇನ್ನಾದರೂ ಇಲ್ಲಿನ ಶೌಚಾಯಲದ ಬೀಗ ತೆರೆಯಲು ಕಾಲ ಕೂಡಿ ಬರುವುದೇ ಎಂಬ ಚಿಂತೆ ಸಾರ್ವಜನಿಕರಲ್ಲಿ ಕಾಡುವಂತಾಗಿದ್ದು ತಕ್ಷಣ ಸಂಬಂಧಪಟ್ಟ ಗ್ರಾಮಾಡಳಿತ ಎಚ್ಚೆತ್ತುಕೊಳ್ಳುವುದೇ ಕಾದು ನೋಡಬೇಕಾಗಿದೆ.