ಎರಡ್ಮೂರು ತಿಂಗಳು ಕಳೆದರು ರಸ್ತೆ ಕಾಮಗಾರಿ ಅಪೂರ್ಣ ; ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
ರಿಪ್ಪನ್‌ಪೇಟೆ: ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಹಳ್ಳಿ ಹೋಬಳಿ ಅರಸಾಳು ಗ್ರಾಮ ಪಂಚಾಯ್ತಿ ಬೆನವಳ್ಳಿ ಗ್ರಾಮದಲ್ಲಿ ಕಳೆದ ಎರಡ್ಮೂರು ತಿಂಗಳ ಹಿಂದೆ ಡಾಂಬರೀಕರಣಕ್ಕೂ ಕಾಂಕ್ರೀಟ್ ರಸ್ತೆ ನಿರ್ಮಿಸುವ ಉದ್ದೇಶದಿಂದ ರಸ್ತೆ ಕಿತ್ತು ಜಲ್ಲಿ ಕಲ್ಲು ಹಾಕಿದ ಗುತ್ತಿಗೆದಾರನೂ ಇಲ್ಲ ರಸ್ತೆಯೋ ಇಲ್ಲದೆ ಇಲ್ಲಿನ ನಿವಾಸಿಗಳು ಹಿಡಿ ಶಾಪ ಹಾಕುವಂತಾಗಿದೆ ಎಂದು ಬೆನವಳ್ಳಿ ಗ್ರಾಮಸ್ಥರಾದ ವೀರೇಶ್, ನಾಗಾರ್ಜುನ, ಸುರೇಶ್‌ಗೌಡ, ಶಾಂತಪ್ಪಗೌಡ ಇನ್ನಿತರರು ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಚುನಾವಣೆಯಲ್ಲಿ ಹೇಗಾದರೂ ಕ್ಷೇತ್ರದ ಜನಪ್ರತಿನಿಧಿಗಳು ಗ್ರಾಮಕ್ಕೆ ಮತಯಾಚನೆಗೆ ಬರಲೇಬೇಕು ಆಗ ನಾವುಗಳು ಚುನಾವಣೆ ಬಹಿಷ್ಕಾರದ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಸಾಕಷ್ಟು ಬಹಿರಂಗ ಚರ್ಚೆಗಳು ವ್ಯಕ್ತಗೊಳ್ಳುತ್ತಿದ್ದು ಕ್ಷೇತ್ರದ ಶಾಸಕರಿಗೆ ಈ ರಸ್ತೆ ಅಭಿವೃದ್ದಿ ಪೂರ್ಣಗೊಂಡತೆ ಕಾಣುತ್ತಿದೆಯೋ ಎಂಬ ಜಿಜ್ಞಾಸೆ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಅವರಿಗೂ ಈ ರಸ್ತೆ ಅಭಿವೃದ್ಧಿಯಾಗುವುದು ಇಷ್ಟ ಇಲ್ಲವೂ ಎಂಬಂತಾಗಿದೆ ಎಂದು ಗ್ರಾಮಸ್ಥರಲ್ಲಿ ಸುದ್ದಿಗೆ ಗ್ರಾಸವಾಗಿದೆ.
ನಿತ್ಯ ನೂರಾರು ವಿದ್ಯಾರ್ಥಿಗಳು ವಯೋವೃದ್ದರು ಅನಾರೋಗ್ಯ ಪೀಡಿತರು ಹೀಗೆ ಹಲವು ರೈತನಾಗರೀಕರು ಓಡಾಡುವ ಈ ರಸ್ತೆ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಅಭಿವೃದ್ದಿಪಡಿಸುವ ಉದ್ದೇಶದಿಂದ ಇದ್ದ ರಸ್ತೆಯನ್ನು ಕಿತ್ತು ಜಲ್ಲಿಕಲ್ಲು ಹರಡಿ ಹೋದವರು ಈವರೆಗೂ ಇತ್ತ ತಲೆ ಹಾಕಿರುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಳ್ಳುವುದರೊಂದಿಗೆ ಈ ಭಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದರ ಬಗ್ಗೆ ಸದ್ಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದರು.