ರಿಪ್ಪನ್‌ಪೇಟೆ : ಗರ್ತಿಕೆರೆಯ 45 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದ್ದು, ಇವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜ.26 ರಂದು ವಿಪರೀತ ಜ್ವರದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಇವರಿಗೆ ಕಳೆದ ನಾಲ್ಕೈದು ದಿನಗಳಿಂದ ಜ್ವರ ಕಡಿಮೆ ಆಗಿರಲಿಲ್ಲ. ನಿನ್ನೆ ಆರ್ ಟಿ ಪಿ ಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರ್ ಟಿ ಪಿ ಸಿಆರ್ ಪರೀಕ್ಷೆಯಲ್ಲಿ ಕೆಎಫ್ ಡಿ ನೆಗೆಟಿವ್ ಬಂದಿದೆ. ಆರ್ ಟಿ ಪಿ ಸಿ ಆರ್ ಪಾಸಿಟಿವ್ ಬಂದರೆ ಮಾತ್ರ ಅದನ್ನ ಕೆಎಫ್ ಡಿ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಆದರೆ ಇತರೆ ರಕ್ತ ಪರೀಕ್ಷೆಯಲ್ಲಿ ಆತನಿಗೆ ಕೆಎಫ್ ಡಿ ಇದೆ ಎಂದು ವೈದ್ಯರು ಬರೆದಿರುವ ಕಾರಣ ಇದನ್ನ ಶಂಕಿತ ಪ್ರಕರಣವೆಂದು ಪರಿಗಣಿಸಲಾಗಿದೆ.
ಎರಡು ವರ್ಷಗಳಿಂದ ಮಲೆನಾಡಿನಲ್ಲಿ ಕೆ ಎಫ್ ಡಿ ಪ್ರಕರಣ ಅತೀ ಹೆಚ್ಚು ದಾಖಲಾಗಿತ್ತು. ಆದರೆ ಈ ವರ್ಷ ಇದು ಎರಡನೇ ಪ್ರಕರಣವಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್ ಡಿ ಸೋಂಕು ಪತ್ತೆಯಾಗಿತ್ತು.