ರಿಪ್ಪನ್‌ಪೇಟೆ: ವೀರಶೈವ ಲಿಂಗಾಯತರನ್ನು ಮತ್ತಿತರರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರು ನೀಡಿರುವ ಪತ್ರಿಕಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಈ ತಕ್ಷಣ ಸಿ.ಟಿ.ರವಿ ಬಹಿರಂಗವಾಗಿ ವೀರಶೈವ ಲಿಂಗಾಯತರ ಕ್ಷಮೆಯಾಚಿಸುವಂತೆ ರಿಪ್ಪನ್‌ಪೇಟೆ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಒತ್ತಾಯಿಸಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಕೂಡಲೇ ಬಹಿರಂಗವಾಗಿ ವೀರಶೈವ ಸಮಾಜಕ್ಕೆ ಕ್ಷಮೆ ಕೇಳಬೇಕು. ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಸಿ.ಟಿ.ರವಿ ವಿರುದ್ದ ಸಮಾಜದವರೆಲ್ಲ ಒಗ್ಗಟ್ಟಾಗಬೇಕು. ಈ ಬಾರಿ ಚುನಾವಣೆಯಲ್ಲಿ ಪಕ್ಷ ಬೇಧ ಮರೆತು ನಾವೆಲ್ಲ ಒಂದಾಗಿ ತಕ್ಕ ಪಾಠ ಕಲಿಸಬೇಕು. ವೀರಶೈವ ಲಿಂಗಾಯತ ಸಮಾಜ ತುಂಬಾ ಸೂಕ್ಷ್ಮ ಸಮಾಜವಾಗಿದ್ದು ಯಾರನ್ನೂ ವಿನಾಃಕಾರಣ ಕೆಣಕದೇ ಕಾಯಕವೇ ಕೈಲಾಸ ಎಂಬುದನ್ನು ಭಾವಿಸುತ್ತಾ ಬಸವಣ್ಣರ ತತ್ವಗಳನ್ನು ಅರಿತು ತಮ್ಮ ಜೀವನ ನಡೆಸುತ್ತಿದೆ. ಆದರೆ ಸಿ.ಟಿ.ರವಿ ಸುಮ್ಮನೆ ವೀರಶೈವ ಲಿಂಗಾಯತರನ್ನು ಕೆಣಕಿದ್ದಾರೆ. ಆದ್ದರಿಂದ ಸಿ.ಟಿ.ರವಿ ವೀರಶೈವ ಲಿಂಗಾಯತ ಸಮಾಜಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕೆದಲುಗುಡ್ಡೆ : ಶ್ರೀಶನೇಶ್ವರಸ್ವಾಮಿ ಜಾತ್ರಾಮಹೋತ್ಸವ
ರಿಪ್ಪನ್‌ಪೇಟೆ: ಸಮೀಪದ ಕೆದಲುಗುಡ್ಡ ಗ್ರಾಮದ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಜಾತ್ರಾಮಹೋತ್ಸವವು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಮಾ. 18 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಮಹಾಪೂಜೆ ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ಶ್ರೀ ದೇವರ ದರ್ಶನ ಸೇವೆ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಂತರ ಮಧ್ಯಾಹ್ನ 3 ಗಂಟೆಗೆ ಶನೇಶ್ವರ ಸ್ವಾಮಿಯ ಪಲ್ಲಕ್ಕಿ ರಾಜಬೀದಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.