HOSANAGARA ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಆರಗಜ್ಞಾನೇಂದ್ರ ಆಗ್ರಹಿಸಿದರು.
ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಬುಧವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ. ತಮ್ಮ 5 ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ ಎಂದು ಹೇಳುತ್ತಿದ್ದರು. ಈಗ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ. ತನಿಖೆ ನಡೆಸುವುದನ್ನೇ ತಡೆಯಲು ಹೊರಟಿದ್ದ ಸಿದ್ದರಾಮಯ್ಯ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದು, ಯಾವುದೇ ತನಿಖೆಗೆ ಸಿದ್ದ ಎಂದಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ತನಿಖೆ ಎದುರಿಸುವುದು ಸರಿಯಲ್ಲ ಎಂದರು.
ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದು ದುರದೃಷ್ಠಕರ. ಒಂದುರಾಷ್ಟ್ರೀಯ ಪಕ್ಷವಾಗಿದ್ದು, ಭ್ರಷ್ಠಾಚಾರಆರೋಪ ಕೇಳಿಬಂದಾಗಲೂ ಆಪಾದನೆಗೆ ಒಳಗಾದವರ ಬೆಂಬಲಕ್ಕೆ ನಿಂತಿರುವುದು ಪಕ್ಷದ ನಿಲುವನ್ನು ತೋರಿಸುತ್ತಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿ, ತನಿಖೆ ಎದುರಿಸಲಿ. ತನಿಖೆ ಬಳಿಕ ಅವರು ‘ಶುದ್ಧರಾಮಯ್ಯ’ ಎಂದು ಸಾಬೀತಾದಲ್ಲಿ ಮತ್ತೆ ಮುಖ್ಯಮಂತ್ರಿಯಾದಲ್ಲಿ ತಮಗೇನೂ ಅಭ್ಯಂತರವಿಲ್ಲ ಎಂದರು.
ಅಡಿಕೆ ಕಲಬೆರಕೆ ಆಘಾತಕಾರಿ ;
ಶಿವಮೊಗ್ಗದ ಎಪಿಎಂಸಿ ಪ್ರಾಂಗಣದಲ್ಲಿಯೇ ಅಡಿಕೆಗೆ ಬಣ್ಣ ಹಾಕುವ ವಿಷಯದ ಕುರಿತು ಪತ್ರಿಕೆಯಲ್ಲಿ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅಡಿಕೆಗೆ ಕೃತಕ ಬಣ್ಣ ಮತ್ತಿತರರ ರಾಸಾಯನಿಕಗಳನ್ನು ಬಳಸಿ ಕಲಬೆರಕೆ ಮಾಡುತ್ತಿರುವುದು ಅಡಿಕೆ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಕುರಿತು ಒಂದೆಡೆ ತನಿಖೆ ನಡೆಯುತ್ತಿದೆ. ಇಂತಹ ಕಲಬೆರಕೆ ಅಡಿಕೆಯನ್ನೇ ಮಾದರಿಯಾಗಿ ತೆಗೆದುಕೊಂಡು ತನಿಖೆ ನಡೆಸಿದರೆ, ಬೆಳೆಗಾರರ ಹಿತಕ್ಕೆ ವ್ಯತಿರಿಕ್ತ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದ ಅವರು, ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಚರ್ಚೆ ನಡೆಸಿದ್ದು, ಅಡಿಕೆಗೆ ಕೃತಕಬಣ್ಣ ಹಾಕುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ, ಪ್ರಮುಖರಾದ ಬೆಳೆಗೋಡು ಗಣಪತಿ, ಎನ್.ಆರ್. ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಉಮೇಶ ಕಂಚುಗಾರ್, ಎಚ್.ಎನ್.ಶ್ರೀಪತಿ, ಸುರೇಶ್ ಸ್ವಾಮಿರಾವ್, ಹಾಲಗದ್ದೆ ಉಮೇಶ್, ಮಂಜುನಾಥ್ ಸಂಜೀವ, ಸತ್ಯನಾರಾಯಣ ವಿ, ನಗರ ನಿತೀನ್, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ಕೋಣೆಮನೆ ಶಿವಕುಮಾರ್, ಮನೋಜ್ ಪೂಜಾರಿ, ಬ್ರಹ್ಮೇಶ್ವರ ಅಭಿಷೇಕ್, ಕೃಷ್ಣವೇಣಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.