ರಿಪ್ಪನ್‌ಪೇಟೆ ; ವಿದ್ಯುತ್ ಲೈನ್ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಕಾರ್ಮಿಕ ಕೇಶವ ಎಂಬಾತ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಉದ್ಯೋಗ ನೀಡಬೇಕು ಮತ್ತು ತಕ್ಷಣ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮತ್ತು ಸಂಬಂಧಿಕರು ಬುಧವಾರ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯುತ್ ಗುತ್ತಿಗೆದಾರ ಹಾಗೂ ಮೆಸ್ಕಾಂ ಅಧಿಕಾರಿಗಳ ಬೇಜವಾದ್ದಾರಿಯಿಂದಾಗಿ ಬಿಳಕಿ ಬಳಿ ವಿದ್ಯುತ್ ಲೈನ್ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಕೇಶವ ಮೃತಪಟ್ಟಿದ್ದು ಅತನ ಕುಟುಂಬಕ್ಕೆ ಸೂಕ್ತ ನ್ಯಾಯ ಕಲ್ಪಿಸಬೇಕೇಂದು ಒತ್ತಾಯಿಸಿ ಕುಟುಂಬದವರು ಮತ್ತು ಸಾರ್ವಜನಿಕರು ಮೃತನ ಮರಣೋತ್ತರ ಪರೀಕ್ಷೆಗೆ ತಡೆಯೊಡ್ಡಿ ಮೆಸ್ಕಾಂ ಕಛೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ ಮತ್ತು ಚಿಕ್ಕಜೇನಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎನ್.ಪಿ.ರಾಜು ಮಧ್ಯಸ್ಥಿಕೆ ವಹಿಸಿ ಮಾತನಾಡಿ, ದುರ್ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಗುತ್ತಿಗೆದಾರ ದೇವರಾಜ್ ಮಳವಳ್ಳಿ, ಪವರ್‌ಮಾನ್ ಕೃಷ್ಣ, ಕೆದಲುಗುಡ್ಡೆ ವಿದ್ಯುತ್ ಪರಿವರ್ತಕ ಅಧಿಕಾರಿ, ಸಹಾಯಕ ಇಂಜಿನಿಯರ್ ವಿರುದ್ಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಮಾನವೀಯತೆ ದೃಷ್ಠಿಯಿಂದ ಗುತ್ತಿಗೆದಾರ 5 ಲಕ್ಷ ರೂ. ಹಾಗೂ ಮೆಸ್ಕಾಂನಿಂದ ಒಂದು ಲಕ್ಷ ರೂ. ಪರಿಹಾರವಾಗಿ ನೀಡಲು ಒಪ್ಪಿದ್ದಾರೆ. ಮೃತನ ತಂಗಿಗೆ ಮೆಸ್ಕಾಂ ಕಛೇರಿಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದಾರೆ. ಈ ಹಿನ್ನಲೆಯಲ್ಲಿ ಸಂಬಂಧಿಕರು ಮತ್ತು ಸಾರ್ವಜನಿಕರು ಮೃತ ಯುವಕನ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತ ಕೇಶವನ ದೇಹವನ್ನು ಗೋಣಿಕೆರೆಯ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿತು.
ಪ್ರತಿಭಟನೆಯಲ್ಲಿ ಚಿದಂಬರ, ಎನ್.ಪಿ.ರಾಜು, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮುಖಂಡರಾದ ನಾಗೇಶ, ವೇದಾವತಿ ಮತ್ತು ಗೀತಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.