ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಾರ್ಷಿಕ ಆದಾಯ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000 ಒಳಗಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಈ ಹಿಂದೆ ₹32,000 ಆದಾಯ ಮಿತಿ ಇತ್ತು. ಈ ಮಿತಿ ಬಹಳ ವರ್ಷಗಳಿಂದ ಮುಂದುವರಿದಿದ್ದರಿಂದ ಅನೇಕ ಅರ್ಹರು ಪಿಂಚಣಿ ಸೌಲಭ್ಯದಿಂದ ಹೊರಗುಳಿದಿದ್ದರು ಎಂದು ಹೇಳಿದರು.
ಜನರ ಬಹುಕಾಲದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ಮಿತಿಯನ್ನು ₹1,20,000ಕ್ಕೆ ಏರಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕುಟುಂಬ ದತ್ತಾಂಶದಿಂದ ಲಭ್ಯವಾದ ಮಾಹಿತಿಯನ್ನು ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಹೋಲಿಕೆ ಮಾಡಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಗುರುತಿಸಲಾಗಿತ್ತು. ಇವರ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲನೆ ನಡೆಸಲಾಗಿತ್ತು.
ಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸದವರು, ನೀಡಿದ ವಿಳಾಸದಲ್ಲಿ ವಾಸವಿಲ್ಲದವರು ಹಾಗೂ ಆದಾಯ ದೃಢೀಕರಣ ಪತ್ರ ಹಾಜರುಪಡಿಸದ 18,06,032 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲನೆ ನಡೆಸಿದ ಬಳಿಕ, ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ನಿಯಮಾನುಸಾರ ಅರ್ಹತೆ ಪರಿಶೀಲಿಸಿ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ.
ಪರಿಶೀಲನೆ ವೇಳೆ ₹32,000ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಅನೇಕ ಫಲಾನುಭವಿಗಳು ಪತ್ತೆಯಾಗಿದ್ದರು. ಆದರೆ, ಅವರ ಆದಾಯ ₹1,20,000 ಒಳಗಿದ್ದರೆ ಅಂತಹ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಬೇಕು ಎಂದು ಡಾ. ಜಿ. ಪರಮೇಶ್ವರ ಸೂಚಿಸಿದ್ದರು.
ಅದರಂತೆ, 23,14,544 ಸಂದೇಹಾಸ್ಪದ ಫಲಾನುಭವಿಗಳ ಪೈಕಿ ಪರಿಶೀಲನೆಯ ನಂತರ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000 ಒಳಗಿನ ವಾರ್ಷಿಕ ಆದಾಯ ಹೊಂದಿರುವ ಅರ್ಹರ ಪಿಂಚಣಿಯನ್ನು ಮುಂದುವರಿಸಲು ಕಂದಾಯ ಇಲಾಖೆ ಆದೇಶಿಸಿದೆ.
ಈ ನಿರ್ಧಾರದಿಂದ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಅವಲಂಬಿಸಿರುವ ಸಾವಿರಾರು ಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿದೆ.

