ಶಿವಮೊಗ್ಗ: 2026-27ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಗಳನ್ನು ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಯೋಜಿಸಲಾಗಿದ್ದು, ಆಸಕ್ತ ಕ್ರೀಡಾಪಟುಗಳಿಂದ ನೋಂದಣಿಗೆ ಆಹ್ವಾನಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ತಾಲೂಕುವಾರು ನಿಗದಿತ ಮೈದಾನಗಳಲ್ಲಿ ಸ್ಪರ್ಧೆಗಳು ಜರುಗಲಿದ್ದು, ಆಯ್ಕೆಯಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.
ಸಾಗರ ತಾಲೂಕಿನ ಸ್ಪರ್ಧೆಗಳು ಆಗಸ್ಟ್ 30ರಂದು ಸಾಗರದ ನೆಹರೂ ಮೈದಾನದಲ್ಲಿ ನಡೆಯಲಿವೆ. ಅದೇ ದಿನ ಸೊರಬ ತಾಲೂಕಿನ ಸ್ಪರ್ಧೆಗಳು ಸೊರಬದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿವೆ.
ಸೆಪ್ಟೆಂಬರ್ 1ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ, ಸೆಪ್ಟೆಂಬರ್ 3ರಂದು ಶಿಕಾರಿಪುರದ ತಾಲೂಕು ಕ್ರೀಡಾಂಗಣದಲ್ಲಿ, ಸೆಪ್ಟೆಂಬರ್ 4ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಹೊಸನಗರದ ತಾಲೂಕು ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೆಪ್ಟೆಂಬರ್ 6ರಂದು ಭದ್ರಾವತಿಯ ವಿ.ವಿ.ಎಸ್.ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.
ಈ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಮತ್ತು ಯೋಗಾಸನ ಸ್ಪರ್ಧೆಗಳು ಮಾತ್ರ ನಡೆಯಲಿವೆ. ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಥವಾ ಆಯ್ಕೆಯಾದ ತಂಡಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅರ್ಹರಾಗಲಿದ್ದಾರೆ.
ಪ್ರತಿಯೊಬ್ಬ ಕ್ರೀಡಾಪಟು ಗರಿಷ್ಠ ಎರಡು ವೈಯಕ್ತಿಕ ಸ್ಪರ್ಧೆ ಮತ್ತು ಒಂದು ಗುಂಪು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು. ಆಯಾ ತಾಲೂಕಿನ ಕ್ರೀಡಾಪಟುಗಳು ತಮ್ಮ ತಾಲೂಕಿನಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಾಗ ಮೂಲ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ.
ಬೇರೆ ತಾಲೂಕಿನ ಆಟಗಾರರು ಭಾಗವಹಿಸಬೇಕಾದರೆ, ಅವರು ಆ ತಾಲೂಕಿನಲ್ಲಿ ಶಿಕ್ಷಣ ಪಡೆಯುತ್ತಿರುವುದು ಅಗತ್ಯ. ನಿಯಮ ಮೀರಿ ಬೇರೆ ತಾಲೂಕಿನ ಆಟಗಾರರನ್ನು ಸೇರಿಸಿದರೆ ಅಂತಹ ತಂಡ ಅಥವಾ ಆಟಗಾರರನ್ನು ಅನರ್ಹಗೊಳಿಸಲಾಗುತ್ತದೆ.
ಕ್ರೀಡಾಪಟುಗಳು ನಿಗದಿತ ದಿನಾಂಕದಂದು ಬೆಳಿಗ್ಗೆ 9.30ರೊಳಗೆ ಕ್ರೀಡಾಂಗಣಕ್ಕೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಬೆಳಿಗ್ಗೆ 9.30ರೊಳಗೆ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಮತ್ತು ಉಪಹಾರ ವ್ಯವಸ್ಥೆ ಇರಲಿದೆ.
ಪಂದ್ಯಾವಳಿ ನಡೆಸಲು ಕನಿಷ್ಠ 4 ತಂಡಗಳು ಇರಬೇಕು. ತಂಡಗಳ ಸಂಖ್ಯೆ ಕಡಿಮೆಯಿದ್ದರೆ ಆಯ್ಕೆ ಪ್ರಕ್ರಿಯೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಸ್ಪರ್ಧೆಗಳು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿವೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವವರು ಮೊಬೈಲ್ ಆಪ್ ಅಥವಾ ವೆಬ್‌ಸೈಟ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

