ಹೊಸನಗರ: ಮಹಾನ್ ದಾರ್ಶನಿಕರು, ಸಾಹಿತಿಗಳು ಹಾಗೂ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರ ಜೀವನ ಚರಿತ್ರೆಯನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರವು ಜಯಂತಿಗಳನ್ನು ಘೋಷಿಸಿ, ಸರ್ಕಾರಿ ರಜೆಯನ್ನೂ ನೀಡುತ್ತದೆ. ಆದರೆ, ವಿಶ್ವಗುರು ಮಹರ್ಷಿ ವಾಲ್ಮೀಕಿಯವರಂತಹ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಿರುವುದು ವಿಷಾದನೀಯ ಎಂದು ತಹಶೀಲ್ದಾರ್ ಭರತ್‌ರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ನಾಯಕರ ಸಮಾಜ ಮತ್ತು ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಕಾರ್ಯಕ್ರಮಗಳನ್ನು ಹಬ್ಬದಂತೆ ಆಚರಿಸುವಾಗ ಅಧಿಕಾರಿಗಳು ಮತ್ತು ಜನರು ಪಾಲ್ಗೊಂಡರೆ ಮಾತ್ರ ಆಚರಣೆಗೆ ನಿಜವಾದ ಅರ್ಥ ಮತ್ತು ಮಹತ್ವ ಬರುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಕ್ರೀಡಾ ನಿರ್ದೇಶಕ ಡಾ. ಅಪ್ಪಣ್ಣ ಮಹಾದೇವಗಸ್ತಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಂಸ್ಕೃತದ ಮೊದಲ ಕವಿಯಾದ ವಾಲ್ಮೀಕಿಯವರನ್ನು ‘ಆದಿಕವಿ’ ಎಂದು ಕರೆಯಲಾಗುತ್ತದೆ. ನಾರದ ಮುನಿಗಳ ಪ್ರೇರಣೆಯಿಂದ ರತ್ನಾಕರನು ಶ್ರೀರಾಮನ ಪರಮ ಭಕ್ತನಾಗಿ ಬದಲಾದ ಪರಿ ಅನನ್ಯವಾದುದು. ರಾಮನ ವನವಾಸದ ಕಾಲದಲ್ಲಿ ಜೊತೆಗಿದ್ದು, ಮುಂದೆ ಸೀತಾದೇವಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡಿದ ಮಹರ್ಷಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಓದಿ, ಅದರ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಸ್.ಹೆಚ್. ನಿಂಗಮೂರ್ತಿ ಮಾತನಾಡಿ, ವಾಲ್ಮೀಕಿಯವರು ಕೇವಲ ಆದಿಕವಿಯಷ್ಟೇ ಅಲ್ಲದೆ, ಇಂದಿನ ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಮನುಷ್ಯ ತನ್ನ ತಪ್ಪುಗಳನ್ನು ತಿದ್ದಿಕೊಂಡರೆ ಹೇಗೆ ಶ್ರೇಷ್ಠ ವ್ಯಕ್ತಿಯಾಗಬಹುದು ಎಂಬುದಕ್ಕೆ ಅವರ ಬದುಕೇ ಸಾಕ್ಷಿ. ವಾಲ್ಮೀಕಿಯವರು ಪೂರ್ವದಲ್ಲಿ ಕಳ್ಳತನ ಅಥವಾ ದರೋಡೆ ಮಾಡುತ್ತಿದ್ದರು ಎಂಬುದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಈ ಕುರಿತು ಅಲಹಾಬಾದ್ ಹೈಕೋರ್ಟ್ ಕೂಡ ಸ್ಪಷ್ಟ ತೀರ್ಪು ನೀಡಿದ್ದು, ಅವರ ಬಗ್ಗೆ ಇಂತಹ ಆಧಾರರಹಿತ ಪದಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದೆ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಬಿ.ಎಂ., ತಾ.ಪಂ. ವ್ಯವಸ್ಥಾಪಕ ಪವನ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಾಗೋಜಿ, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಆನಂದಪ್ಪ, ರಾಘವೇಂದ್ರ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

