ಹೊಸನಗರ

ಭೂಮಿ ಹುಣ್ಣಿಮೆಯಂದು ಭೂತಾಯಿಗೆ ಪೂಜೆ ಸಲ್ಲಿಸಿದರೆ ವರ್ಷವಿಡೀ ನೆಮ್ಮದಿ: ಪ್ರಗತಿಪರ ರೈತ ರತ್ನಾಕರ್

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ಎಂದರೆ ಭೂತಾಯಿಯ ಸೀಮಂತ ಶಾಸ್ತ್ರದಂತೆ ಬಯಕೆ ತೀರಿಸುವ ವಿಶೇಷ ಹಬ್ಬವಾಗಿದೆ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ಮಡಿವಾಳರು, ರಾಮಕ್ಷತ್ರಿಯರು ಸೇರಿದಂತೆ ಎಲ್ಲಾ ಕೃಷಿಕ ಸಮುದಾಯದವರು ಜಾತಿಭೇದವಿಲ್ಲದೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

Bhoomi Hunnime Hosanagara

ಹೊಸನಗರ: “ನಾವು ಆರ್ಥಿಕವಾಗಿ ಎಷ್ಟೇ ಸ್ಥಿತಿವಂತರಾಗಿದ್ದರೂ ಅಥವಾ ದೊಡ್ಡ ಮಟ್ಟದ ಕೃಷಿಕರಾಗಿದ್ದರೂ, ವರ್ಷಕ್ಕೊಮ್ಮೆ ಬರುವ ಭೂಮಿ ಹುಣ್ಣಿಮೆಯಂದು ಭೂತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಹತ್ತು ಜನರಿಗೆ ಅನ್ನದಾನ ಮಾಡಿದರೆ ಮಾತ್ರ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಇಲ್ಲದಿದ್ದರೆ ನಾವು ಬೆಳೆದ ಫಸಲಿಗೂ ಸಾರ್ಥಕತೆ ಇರುವುದಿಲ್ಲ. ಕೃಷಿಕರ ಮಕ್ಕಳಾಗಿ ಹುಟ್ಟಿದ ನಾವು ಭೂಮಿಯನ್ನು ಆರಾಧಿಸುವ ಸಂಪ್ರದಾಯವನ್ನು ಎಂದಿಗೂ ಮರೆಯಬಾರದು” ಎಂದು ಹೊಸನಗರದ ರೈತ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಭೂಮಿ ಹುಣ್ಣಿಮೆಯ ಪ್ರಯುಕ್ತ ಹೊಸನಗರದ ತಮ್ಮ ಭತ್ತದ ಗದ್ದೆಯಲ್ಲಿ ಮುಂಜಾನೆ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ನೆರೆದಿದ್ದ ಬಂಧು-ಮಿತ್ರರಿಗೆ ಅನ್ನಸಂತರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಮಲೆನಾಡಿನ ವಿಶಿಷ್ಟ ಆಚರಣೆ:

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ಎಂದರೆ ಭೂತಾಯಿಯ ಸೀಮಂತ ಶಾಸ್ತ್ರದಂತೆ ಬಯಕೆ ತೀರಿಸುವ ವಿಶೇಷ ಹಬ್ಬವಾಗಿದೆ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ಮಡಿವಾಳರು, ರಾಮಕ್ಷತ್ರಿಯರು ಸೇರಿದಂತೆ ಎಲ್ಲಾ ಕೃಷಿಕ ಸಮುದಾಯದವರು ಜಾತಿಭೇದವಿಲ್ಲದೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಸಿರುಟ್ಟು ಕಂಗೊಳಿಸುವ ಗದ್ದೆಗಳಿಗೆ ತೆರಳಿ, ಬಗೆಬಗೆಯ ಖಾದ್ಯಗಳನ್ನು ನೈವೇದ್ಯ ಮಾಡಿ ಭೂರಮೆಯ ಮಡಿಲು ತುಂಬುವುದು ಇಲ್ಲಿನ ಹಿಂದಿನಿಂದಲೂ ಬಂದಿರುವ ಸಂಪ್ರದಾಯ.

ಹಬ್ಬದ ಸಿದ್ಧತೆ ಮತ್ತು ವಿಶೇಷ ಖಾದ್ಯಗಳು:

ಹಬ್ಬಕ್ಕೆ ಒಂದು ವಾರ ಇರುವಾಗಲೇ ರೈತ ಮಹಿಳೆಯರು ಸಿದ್ಧತೆಗಳನ್ನು ಆರಂಭಿಸುತ್ತಾರೆ. ಬಿದಿರು ಅಥವಾ ಬೆತ್ತದ ಹಿಡಿಕೆಯುಳ್ಳ ದೊಡ್ಡ ಹಾಗೂ ಸಣ್ಣ ಬುಟ್ಟಿಗಳಿಗೆ ಗೋವಿನ ಸಗಣಿ ಸಾರಿಸಿ ಒಣಗಿಸಲಾಗುತ್ತದೆ. ನಂತರ ಅದಕ್ಕೆ ಕೆಮ್ಮಣ್ಣು ಹಾಗೂ ಜೇಡಿಮಣ್ಣು ಬಳಿದು, ಅಕ್ಕಿ ಹಿಟ್ಟಿನ ಬಿಳಿ ಬಣ್ಣದಿಂದ ಆಕರ್ಷಕ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಹಬ್ಬದ ಹಿಂದಿನ ರಾತ್ರಿಯಿಡೀ ಜಾಗರಣೆ ಮಾಡುವ ಮಹಿಳೆಯರು ಕಜ್ಜಾಯ ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ವಿಶೇಷವಾಗಿ ಅಮಟೆಕಾಯಿ, ಹಾಗಲಕಾಯಿ, ಹರಿವೆ ಸೊಪ್ಪು ಸೇರಿದಂತೆ ವಿವಿಧ ಬಗೆಯ ಕಾಡು ಸೊಪ್ಪು-ತರಕಾರಿಗಳನ್ನು ಬೆರೆಸಿ, ಉಪ್ಪು ಬಳಸದೆ ವಿಶೇಷ ಪಲ್ಯ ಹಾಗೂ ‘ಹಚ್ಚಂಬಲಿ’ ತಯಾರಿಸಿ ಭೂತಾಯಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಗರ್ಭಿಣಿ ಮಗಳಿಗೆ ಸೀಮಂತ ಮಾಡುವಷ್ಟೇ ಶ್ರದ್ಧೆಯಿಂದ ಭೂಮಿಗೆ ಪೂಜೆ ಸಲ್ಲಿಸಿ, ಬಂದವರಿಗೆಲ್ಲಾ ಊಟ ಬಡಿಸುವುದು ಈ ಹಬ್ಬದ ಹೆಗ್ಗಳಿಕೆಯಾಗಿದೆ.

ಸಂಪ್ರದಾಯ ಮರೆಯದ ಸುಶಿಕ್ಷಿತ ಕುಟುಂಬ:

ರತ್ನಾಕರ್ ಅವರ ಮಕ್ಕಳು ಪ್ರಸ್ತುತ ವೈದ್ಯಕೀಯ, ಪಿಡಿಒ (PDO) ಹಾಗೂ ಪೊಲೀಸ್ ಇಲಾಖೆಯಂತಹ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳು ಉನ್ನತ ಸ್ಥಾನದಲ್ಲಿದ್ದರೂ ತಮ್ಮ ಮೂಲ ಕೃಷಿ ಸಂಸ್ಕೃತಿಯನ್ನು ಮರೆಯದೆ, ಪ್ರತಿ ವರ್ಷ ಭೂಮಿ ಹುಣ್ಣಿಮೆಯಂದು ಇಡೀ ಕುಟುಂಬ ಒಟ್ಟಾಗಿ ಸೇರುತ್ತದೆ. ತಮ್ಮ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಭೂತಾಯಿಗೆ ಪೂಜೆ ಸಲ್ಲಿಸಿ, ಸಂಬಂಧಿಕರು ಹಾಗೂ ಆಪ್ತರಿಗೆ ಬೆಳಿಗ್ಗೆಯೇ ಭೋಜನ ಉಣಬಡಿಸುವ ಮೂಲಕ ರತ್ನಾಕರ್ ಕುಟುಂಬ ಮಾದರಿಯಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!