SORABA | ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿಗೆ ಕೆಲ ಕಾನೂನಾತ್ಮಕ ತೊಡಕುಗಳಿದ್ದು, ಅವುಗಳನ್ನು ಶೀಘ್ರವೇ ನಿವಾರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನ ಆಡಳಿತ ಮಂಡಳಿ ಕಚೇರಿಯಲ್ಲಿ ಅರಣ್ಯ, ಮುಜುರಾಯಿ, ಕಂದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ. ಆದರೆ, ದೇಗುಲವು ಪುರಾತತ್ವ ಇಲಾಖೆಯ ವ್ಯಾಪ್ತಿಗೊಳಪಡುವುದರಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿದೆ. ಇವುಗಳನ್ನು ಶೀಘ್ರವೇ ನಿವಾರಿಸಿಕೊಂಡು, ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ದೇವಸ್ಥಾನದ ಆವರಣದಲ್ಲಿ ಕಾಮಗಾರಿ ನಡೆಸಲು ಹಾಗೂ ದೇವಸ್ಥಾನವನ್ನು ದುರಸ್ತಿ ಮಾಡಲು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ದೇವಸ್ಥಾನದ ಬಗ್ಗೆ ಕಾಳಜಿ ಹೊಂದಿದ್ದಾರೆ. ದೇವಸ್ಥಾನ ಪ್ರಾಂಗಣದ ಸುಮಾರು 300 ಮೀಟರ್ ಆವರಣದಲ್ಲಿ ಕೆಲಸಗಳನ್ನು ಕೈಗೊಳ್ಳುವಂತಿಲ್ಲ. ಈಗಾಗಲೇ ಅಗತ್ಯವಿರುವ ಸುಮಾರು 25 ಕೆಲಸಗಳ ಕುರಿತು ಪಟ್ಟಿ ಮಾಡಲಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗುವುದು. ತದ ನಂತರದಲ್ಲಿ ಇಲಾಖೆಯ ಅನುಮತಿ ಪಡೆದು ದೇವಸ್ಥಾನ ದುರಸ್ತಿ, ಸೇವಾ ಕೌಂಟರ್, ನಾಮ ಫಲಕಗಳ ಅಳವಡಿಕೆ, ನೆರಳಿಗಾಗಿ ಶೆಡ್ ನಿರ್ಮಾಣ, ತಾಯಂದಿರಿಗಾಗಿ ಆರೈಕೆ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದು ಪ್ರಾಂಗಣದ ಸುತ್ತಲಿನ ಸುಮಾರು 10 ಎಕರೆ ಪ್ರದೇಶವನ್ನು ಸುಪರ್ಧಿಗೆ ಪಡೆದು ಪೊಲೀಸ್ ಉಪಠಾಣೆ, ಯಾತ್ರಿ ನಿವಾಸ ಸೇರಿದಂತೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಲಾಗುವುದು. ದೇವಸ್ಥಾನದ ಆದಾಯದ ಶೇ. 30 ರಷ್ಟು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಇದನ್ನು ಬಳಸಿಕೊಂಡು ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನಾಶೀರ್ವಾದ ಪಡೆದ ಜಿಲ್ಲಾಧಿಕಾರಿಗಳು ದೇವಸ್ಥಾನ ಮಳೆಯಿಂದ ಸೂರುತ್ತಿರುವುದು ಹಾಗೂ ಅಗತ್ಯವಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಆರ್. ಯತೀಶ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಮುಜರಾಯಿ ತಹಶೀಲ್ದಾರ್ ಪ್ರದೀಪ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಪುರಾತತ್ವ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿ ನಂದಕುಮಾರ್, ಪ್ರವಾಸೋದ್ಯಮ ಇಲಾಖೆಯ ಧರ್ಮಪ್ಪ ಸೇರಿದಂತೆ ಕಂದಾಯ, ಅರಣ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ವರದಿ : ಪುರುಷೋತ್ತಮ ಎನ್. ಗದ್ದೆಮನೆ
Read more
ಅತಿವೃಷ್ಠಿಯಿಂದ ಹಾನಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸರ್ಕಾರ ಬದ್ಧ ; ಕಲಗೋಡು ರತ್ನಾಕರ