SORABA | ಮಳೆ, ಗಾಳಿಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಮಾಣ ಮನೆಯೊಂದು ಸಂಪೂರ್ಣ ಜಖಂಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಹೊಳೆಮರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರತ್ನಮ್ಮ ಎಂಬುವವರ ಮನೆಯ ಹಿಂಭಾಗದ ಬೃಹತ್ ಗಾತ್ರದ ಆಲದಮರ ಮನೆ ಮೇಲೆ ಉರುಳಿದೆ. ಪುತ್ರ ಪ್ರವೀಣ್ ಧರ್ಮಪ್ಪ ಕಾನಡೆ ಅವರು ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಬಿರುಸಿನ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಮನೆಯ ಮೇಲೆ ಉರುಳಿದೆ. ಮನೆಯಲ್ಲಿದ್ದ ಪ್ರವೀಣ್ ತಾಯಿ ರತ್ನಮ್ಮ, ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿನ ಪೀಠೋಪಕರಣಗಳು, ರೆಫ್ರಿಜರೇಟರ್, ಗೃಹೋಪಯೋಗಿ ಸಾಮಗ್ರಿಗಳು ಸೇರಿದಂತೆ ಬೈಕ್ ಸಹ ಸಂಪೂರ್ಣ ಜಖಂಗೊಂಡಿದೆ.
ಮಮತಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಮೋಹನ್ ಕಾನಡೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಿಪ್ಪನ್‌ಪೇಟೆ – ತೀರ್ಥಹಳ್ಳಿ ರಾ.ಹೆ.ಗೆ ಉರುಳಿದ ಮರಗಳು :
RIPPONPETE | ಕಳೆದೆರಡು ದಿನಗಳಿಂದ ಕೊಂಚ ಬಿಡುವು ನೀಡಿದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದು ಅಲ್ಲಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದ್ದಾನೆ.
ಗಾಳಿ, ಮಳೆ ಕಾರಣ ರಿಪ್ಪನ್‌ಪೇಟೆ – ತೀರ್ಥಹಳ್ಳಿ ಮಾರ್ಗದ ಬಿಲ್ಲೇಶ್ವರದ ಸಮೀಪ ಇಂದು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಎರಡು ಮರಗಳು ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಜನಪ್ರತಿನಿಧಿಗಳು, ಅಧಿಕಾರಿಗಳು ಯಾರು ಘಟನಾ ಸ್ಥಳಕ್ಕೆ ಸುಳಿಯದ ಕಾರಣ ಗ್ರಾಮಸ್ಥರೇ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.