Hosanagara

ರಮಣೀಯ ವನಸಿರಿಯ ಮಧ್ಯೆ ಬೃಹದಾಕಾರದ ಕಲ್ಲು ಬಂಡೆಯಲ್ಲಿ ನೆಲೆನಿಂತ ಅಮ್ಮನಘಟ್ಟ ಜೇನುಕಲ್ಲಮ್ಮ

HOSANAGARA ; ಸೆ.17 ರಿಂದ
ಮಲೆನಾಡು ಭಾಗದ ಶಕ್ತಿದೇವತೆ ಎಂದೆ ಹೆಸರು ಪಡೆದ ಕೋಡೂರು ಸಮೀಪದ ಅಮ್ಮನಘಟ್ಟದ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ ಆರಂಭವಾಗಲಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಾದಿಗಳ ಸಕಲ ಅಭಿಷ್ಟಗಳನ್ನು ಈಡೇರಿಸುವ ಶ್ರೀ ಜೇನುಕಲ್ಲಮ್ಮ ದೇವಿ ನೆಲೆವೀಡಾದ ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ.
ಶಿವಮೊಗ್ಗ ಜಿಲ್ಲೆಯ ವಿಶಿಷ್ಟ ಪ್ರಾಕೃತಿಕ ಸೌಂದರ್ಯ ಹೊಂದಿದ ಧಾರ್ಮಿಕ ಶ್ರದ್ಧಾಕೇಂದ್ರವಾದ ಜೇನಮ್ಮನಘಟ್ಟ ಹಲವು ಜನಾಂಗಗಳ ಕುಲದೈವಿಯಾಗಿ ನೆಲೆನಿಂತ ತಾಣ.

ರಮಣೀಯ ವನಸಿರಿಯ ಮಧ್ಯೆ ಬೃಹದಾಕಾರದ ಕಲ್ಲು ಬಂಡೆಗಳು. ಮನ ಸೂರೆಗೊಳ್ಳುವ ಹಸಿರು ಸಂಪತ್ತಿನ ಸಸ್ಯಗಳು. ದಟ್ಟ ಕಾನನದಲ್ಲಿ ತೂರಿ ಬರುವ ಜೇನು ನೊಣಗಳ ಝೇಂಕಾರ. ನಿಸರ್ಗ ನಿರ್ಮಿತ ಹೆಬ್ಬಂಡೆಯನ್ನೆ ಆಲಯ ಮಾಡಿಕೊಂಡ ಶ್ರೀದೇವಿ. ಇದು ಅಮ್ಮನಘಟ್ಟದ ಒಟ್ಟಾರೆ ಚಿತ್ರಣ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ವೈಭವ ಸಾರುವ ಜಾತ್ರೆ :

ಹೆಬ್ಬಂಡೆಯನ್ನು ಆಲಯ ಮಾಡಿಕೊಂಡು ನೆಲೆನಿಂತ ಶ್ರೀ ಜೇನುಕಲ್ಲಮ್ಮ ದೇವಿ ತನ್ನಲ್ಲಿಗೆ ಬರುವ ಭಕ್ತರನ್ನು ಎಂದಿಗೂ ಕೈ ಬಿಡಲಾರಳು. ಸಂಕಷ್ಟದಲ್ಲಿ ಹೊತ್ತ ಎಲ್ಲ ಹರಕೆ ಇಲ್ಲಿ ಸಿದ್ಧಿಸುತ್ತದೆ ಎಂಬುದು ಪ್ರತೀತಿ. ಅದಕ್ಕೆಂದೆ ನಾಡಿನ ಉದ್ದಗಲದಲ್ಲೂ ಶ್ರೀದೇವಿಯ ಭಕ್ತರಿದ್ದಾರೆ.

ಹುಣ್ಣಿಮೆಯಿಂದ ಅಮಾವಾಸ್ಯೆವರೆಗಿನ ಮಂಗಳವಾರ, ಶುಕ್ರವಾರ ದಿನಗಳಂದು ಜಾತ್ರೆಗಳು ನಡೆಯುತ್ತವೆ. ಆ ದಿನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಘಟ್ಟಕ್ಕೆ ಬರುತ್ತಾರೆ. ಬಂದವರು ತಮ್ಮ ಹರಕೆ ಸಲ್ಲಿಸಿ ಪೂಜೆ ನಡೆಸಿ ಪುನೀತರಾಗುತ್ತಾರೆ.

ಸ್ಥಳ ಪುರಾಣ :

ಅಮ್ಮನಘಟ್ಟದ ತುಂಬೆಲ್ಲ ಬೃಹದಾಕಾರದ ಕಲ್ಲುಬಂಡೆಗಳೆ ಕಾಣ ಸಿಗುತ್ತವೆ. ಬಂಡೆಗಳು ಜೇನುಗಳ ಆವಾಸ ಸ್ಥಾನವಾಗಿವೆ. ಜೇನುಗೂಡುಗಳ ಮತ್ತು ಕಲ್ಲು ಬಂಡೆಗಳ ಪೊಟರೆಯಲ್ಲಿ ನೆಲೆ ನಿಂತ ಕಾರಣ ಶ್ರೀ ದೇವಿಗೆ ಜೇನುಕಲ್ಲಮ್ಮ ಎಂದು ಹೆಸರು ಬಂದಿದೆ.

ಈ ಹಿಂದೆ ಜಮದಗ್ನಿ ಮಹರ್ಷಿಯು ತನ್ನ ಮಡದಿ ರೇಣುಕಾದೇವಿಯಲ್ಲಿ ವಿರಸಗೊಂಡು ತನ್ನ ಮಗ ಪರಶುರಾಮನನ್ನು ಕರೆಸಿ ತಾಯಿಯ ಶಿರಛೇಧನಕ್ಕೆ ಆಜ್ಞಾಪಿಸುತ್ತಾರೆ. ಅಂತೆಯೇ ಮಗ ಪರಶುರಾಮ ಶಿರವನ್ನು ಕತ್ತರಿಸಿದಾಗ ದೇವಿಯ ಅಗೋಚರ ಶಕ್ತಿಯೊಂದು ಇಲ್ಲಿ ಘಟ್ಟದ ಕಲ್ಲು ಬಂಡೆಗಳ ಮಧ್ಯೆ ನೆಲೆಸಿತು. ಅಲ್ಲಿಂದ ಭಕ್ತರು ಈಕೆಯನ್ನು ಜೇನುಕಲ್ಲಮ್ಮ ಎಂದೆ ಪೂಜೆಸಿದರು ಎನ್ನುತ್ತದೆ ಸ್ಥಳಪುರಾಣ.

ಹಳೆ ಅಮ್ಮನಘಟ್ಟ :

ಈಗಿರುವ ಅಮ್ಮನಘಟ್ಟ ಎದುರು ಮತ್ತೊಂದು ಅಮ್ಮನಘಟ್ಟ ಇದೆ. ಅದು ಹಳೆ ಅಮ್ಮನಘಟ್ಟ. ಇಲ್ಲಿಯೇ ಮೂಲಮೂರ್ತಿ ಇದ್ದಿದ್ದು. ಈ ಘಟ್ಟ ದುರ್ಗಮವಾಗಿದ್ದು ಭಕ್ತರು ಹೋಗಿಬರಲು ಕಷ್ಟಸಾಧ್ಯವಾಗಿದೆ. ಜಾತ್ರೆ ದಿನದಲ್ಲಿ ಗರ್ಭಿಣಿಯೋರ್ವಳು ಅಲ್ಲೆ ಪ್ರಸವಿಸಿದ ಕಾರಣ ಘಟ್ಟ ಪರಿಸರ ಮೈಲಿಗೆ ಆಗಿ ಅಮ್ಮ ಕೋಪಗೊಂಡು ಎದುರಿದ್ದ ಘಟ್ಟಕ್ಕೆ ಬಂದು ನೆಲೆಸಿದಳು ಎನ್ನುತ್ತದೆ ಪುರಾಣ.

ಬುತ್ತಿ ಸೇವೆ :

ಅಮ್ಮನಿಗೆ ನಡೆದುಕೊಳ್ಳುವ ಜನಾಂಗದವರು ಬುತ್ತಿ ಸೇವೆ ಒಪ್ಪಿಸದೇ ಜಾತ್ರೆಗೆ ಬರುವಂತಿಲ್ಲ. ಜಾತ್ರೆ ದಿನದಂದು ಬುತ್ತಿ ಕಟ್ಟಿಕೊಂಡು ಬರುವ ಕುಟುಂಬಸ್ಥರು ಪೂಜೆ, ಸೇವೆ ಸಲ್ಲಿಸಿ ಅಲ್ಲಿಯೇ ಬುತ್ತಿ ಉಂಡು ಮರಳುವುದು ಪದ್ದತಿ. ಈ ಸೇವೆ ಸಲ್ಲಿಸದೇ ಜಾತ್ರೆಗೆ ಹೋಗುವಂತಿಲ್ಲ ಎಂಬ ಕರಾರು ಎಷ್ಟೋ ಕುಟುಂಬಗಳಲ್ಲಿದೆ. ನವ ದಂಪತಿಗಳು, ಚೊಚ್ಚಲ ಮಕ್ಕಳ ತಾಯಂದಿರು ಜಾತ್ರೆಗೆ ಬರಲೇ ಬೇಕೆಂಬುದು ಇಲ್ಲಿನ ಪರಿಪಾಠವಾಗಿದೆ.

ಹರಕೆ ನಾಗ :

ತೋಟ, ಗದ್ದೆ, ಕೊಟ್ಟಿಗೆ, ದನಕರುಗಳ ಬಗ್ಗೆ ಹರಕೆ ಹೊತ್ತ ಗ್ರಾಮೀಣರು ಹರಕೆ ನಾಗ ಒಪ್ಪಿಸುತ್ತಾರೆ. ಆಯಾಯ ಹರಕೆಗೆಂದೆ ಬಗೆಬಗೆಯ ತಾಮ್ರದ ತಗಡಿನ ನಾಗಗಳು ಇಲ್ಲಿ ಸಿಗುತ್ತವೆ.

ಸಂರಕ್ಷಿತ ತಾಣ :

ಕಲ್ಲುಬಂಡೆಗಳ ರಾಶಿ ರಾಶಿಯನ್ನು ತನ್ನಲ್ಲಿ ಹುದುಗಿಸಿಕೊಂಡ ಅಮ್ಮನಘಟ್ಟ ಅಮೂಲ್ಯ ಗಿಡಮೂಲಿಕೆಗಳ ಕಾಡಾಗಿದೆ. ಸುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರುಣಿಸುವ ನೀರಸೆಲೆ ಆಗಿರುವ ಘಟ್ಟ ಪ್ರದೇಶವನ್ನು ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದೆ.

ಜಾತ್ರೆ ಆರಂಭ :

ಈ ಬಾರಿ ಸೆ.16 ರಂದು ಮೂಲ ಸ್ಥಾನದಲ್ಲಿ ಪೂಜೆ. 17 ರಂದು ಕಂಕಣ ಕಟ್ಟುವುದು, ಮತ್ತು ಸೆ.20ರಿಂದ ಅಮ್ಮನಘಟ್ಟದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜಾತ್ರೆ ನಡೆಯಲಿದ್ದು, ನವರಾತ್ರಿಯಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ವಿಜಯದಶಮಿಯಂದು ಚಂಡಿಕಾಹೋಮ ಆಯೋಜಿಸಲಾಗಿದೆ. ಆ ದಿನಗಳಲ್ಲಿ ಜನಸ್ತೋಮವೇ ಘಟ್ಟದತ್ತ ಹರಿದು ಬರುವುದು ವಿಶೇಷವಾಗಿದೆ.

ಲೇಖನ : ಪುಷ್ಪಾ ಜಾಧವ್, ಹೊಸನಗರ

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>