ಶ್ರೀಗಂಧ ಫೌಂಡೇಶನ್‌ನಿಂದ ಹಡ್ಲುಬೈಲು ಶಾಲೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ಹುಂಚ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಡ್ಲುಬೈಲು ಇಲ್ಲಿ ಶ್ರೀಗಂಧ ಫೌಂಡೇಶನ್ (ರಿ) ಬೆಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿ, ರೇನ್ ಕೋಟ್ ಹಾಗೂ ಬ್ಯಾಗ್ ವಿತರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ಶ್ರೀಗಂಧ ಫೌಂಡೇಶನ್‌ನ ಅಧ್ಯಕ್ಷ ಪ್ರಶಾಂತ್ ಪತಂಗೆ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶವನ್ನಿಟ್ಟುಕೊಂಡು ಕಳೆದ 8-10 ವರ್ಷಗಳಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಜಾಮೆಟ್ರಿ, ಪೆನ್, ಪೆನ್ಸಿಲ್ ಮುಂತಾದವುಗಳನ್ನು ವಿತರಿಸುತ್ತಿದೆ. ಮಾತ್ರವಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ ಎಂದರು.

ಸರ್ಕಾರಿ ಶಾಲೆಗಳ ಸಬಲೀಕರಣದಿಂದ ಮಾತ್ರ ಸಮಾಜದ ಎಲ್ಲ ಸಮುದಾಯದ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ದಾಖಲಾತಿ ಕುಂಠಿತಗೊಂಡು ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ದುರಂತಕ್ಕೆ ನಾಂದಿಯಾಗಲಿದೆ. ಈ ನಿಟ್ಟಿನಲ್ಲಿ ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಸರ್ಕಾರಿ ಶಾಲೆಯ ಶಿಕ್ಷಕರ ಮೂಲಕ ಸದೃಢ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದ ಅವರು, ಸಶಕ್ತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅತ್ಯವಶ್ಯಕ ಹಾಗಾಗಿ ಸಮಾಜದ ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯಬೇಕೆಂಬ ಗುರಿ ನಮ್ಮ ಫೌಂಡೇಷನ್ ಹೊಂದಿದೆ. ಮಕ್ಕಳ ಶಿಕ್ಷಣಕ್ಕೆ ಸದಾ ನಿಮ್ಮೊಂದಿಗಿರುತ್ತೇವೆ ಎಂದರು.

ನಂತರ ಮಾತನಾಡಿದ ಸುಂದರೇಶ್, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀಗಂಧ ಫೌಂಡೇಶನ್ ನಿಕಟಪೂರ್ವ ಅಧ್ಯಕ್ಷ ಆನಂದ್, ಸದಸ್ಯರುಗಳಾದ ಹೇಮಾ, ಅಭಿನವ್, ಭರತ್ ಮಾತನಾಡಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಚಂದ್ರಶೇಖರ್, ಸಹ ಶಿಕ್ಷಕಿ ಕಲಾವತಿ ಹಾಗೂ ಎಸ್.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು, ಪೋಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment