RIPPONPETE ; ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಇತ್ತೀಚೆಗೆ ವಲಯ ಮಟ್ಟದ 14 – 17 ವರ್ಷದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ನಡೆಸಲಾಗಿದ್ದು ಕ್ರೀಡಾಂಗಣದ ತುಂಬೆಲ್ಲಾ ಕಸದ ರಾಶಿ ತುಂಬಿಕೊಂಡಿದ್ದು ಇದನ್ನು ಸ್ವಚ್ಚಗೊಳಿಸದೆ ಇರುವ ಬಗ್ಗೆ ವಿದ್ಯಾರ್ಥಿ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೊಶಕ್ಕೆ ಕಾರಣವಾಗಿದೆ.
ಕ್ರೀಡಾಕೂಟವನ್ನು ಆಯೋಜಿಸಲಾಗಿರುವ ಕೆಲವು ವಿದ್ಯಾಸಂಸ್ಥೆಯವರು ಅಲ್ಲಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ಮತ್ತು ನಂತರ ಆ ಕ್ರೀಡಾಂಗಣವನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ. ಆದರೆ ಎಲ್ಲವನ್ನು ಗಾಳಿ ತೂರಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕ್ರೀಡಾಂಗಣದಲ್ಲಿ ಕಸ ಎಸೆದಿದ್ದಾರೆಂದು ಪೋಷಕರಾದ ಸೋಮಶೇಖರ, ರಾಘವೇಂದ್ರ, ಸುಬ್ಬನಾಯ್ಕ್, ತೀರ್ಥಪ್ಪ, ಮಂಜಪ್ಪ, ಸುಧಾಕರ ಇನ್ನಿತರರು ಆರೋಪಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ ಕೆಲವರು ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್ (ವಾಯುವಿಹಾರ) ಮಾಡುತ್ತಾರೆ. ಕ್ರೀಡಾಂಗಣದಲ್ಲಿ ಕಸದ ರಾಶಿ ಕಂಡು ಹುಳಹಪ್ಪಡೆಗಳು ಎಲ್ಲಿ ಇವೆಯೋ ಎಂಬ ಜೀವಭಯದಲ್ಲಿ ವಾಯುವಿಹಾರಕ್ಕೂ ಬಾರದಂತಾಗಿದ್ದರೆ, ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿಗಳ ಆಟೋಟಕ್ಕೆ ಸಹ ತುಂಬಾ ಕಷ್ಟವಾಗಿದೆ.
ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವತ್ತಾ ಮುಂದಾಗುವರೇ ಕಾದು ನೋಡಬೇಕಾಗಿದೆ.