RIPPONPETE ; ಅಸಾಧರಣ ಧೈರ್ಯ ಪ್ರದರ್ಶಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಶಾಲೆಯ ಮಣಿಕಂಠನಿಗೆ ರಾಜ್ಯ ಸರ್ಕಾರದ ಶೌರ್ಯ ಪ್ರಶಸ್ತಿ ಪ್ರಕಟ ಮಾಡಿದೆ.
ಬಾಳೂರು ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಕು. ಮಣಿಕಂಠ ಆರ್ ಇವನು 2022-23 ರ ಶೈಕ್ಷಣಿಕ ವರ್ಷದಲ್ಲಿ ನಲಿಕಲಿ ತರಗತಿ ಸಹಪಾಠಿಯ ಶಾಲಾ ಬ್ಯಾಗ್ ನಲ್ಲಿದ್ದ ನಾಗರಹಾವನ್ನು ಗಮನಿಸಿ ತಕ್ಷಣವೇ ಸಮಯಪ್ರಜ್ಞೆ ಮತ್ತು ಚಾಣಾಕ್ಷತನದಿಂದ ಬ್ಯಾಗಿನ ಜಿಪ್ ಮುಚ್ಚಿ ಬ್ಯಾಗನ್ನು ಶಾಲಾ ಆವರಣಕ್ಕೆ ಕೊಂಡೊಯ್ದು ಅಸಾಧಾರಣ ಧೈರ್ಯ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮಕ್ಕಳಿಗೆ ಪ್ರತಿವರ್ಷ ಮಕ್ಕಳ ದಿನಾಚರಣೆ ನಿಮಿತ್ತ ನೀಡಲಾಗುವ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ನ. 29 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲಿದ್ದಾನೆ.
ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಳಗೊಂಡಂತೆ ಎಲ್ಲಾ ಅಧಿಕಾರಿ ವೃಂದದವರು, ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಸಮಸ್ತ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಆ ದಿನ ಏನಾಗಿತ್ತು ?
2ನೇ ತರಗತಿಯಲ್ಲಿ ಓದುತ್ತಿದ್ದ ಭುವನ್ ಎಂಬ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಹಾವು ಪ್ರತ್ಯಕ್ಷವಾಗಿತ್ತು. ಬ್ಯಾಗಿನಿಂದ ಪುಸ್ತಕ ಹೊರ ತೆಗೆಯುವಾಗ ಕಾಣಿಸಿಕೊಂಡ ನಾಗರಹಾವನ್ನು ನೋಡಿ ಆತ ಕಂಗಾಲಾಗಿದ್ದ.
ತಕ್ಷಣವೇ ಸಹಪಾಠಿ ಮಣಿಕಂಠನಿಗೆ ಮಾಹಿತಿ ನೀಡಿರುವ ಭುವನ್ ತನ್ನ ಬ್ಯಾಗ್ನಲ್ಲಿ ಹಾವಿದೆ ಎಂದು ಹೇಳಿದ್ದಾನೆ. ತಕ್ಷಣವೇ ಬ್ಯಾಗ್ ನ ಜಿಪ್ ಹಾಕಿ, ಶಿಕ್ಷಕರಿಗೆ ಮಾಹಿತಿ ನೀಡಿರುವ ಮಣಿಕಂಠ ಇದರಲ್ಲಿ ಹಾವಿದೆ ಎಂಬುದನ್ನು ತಿಳಿಸಿದ್ದಾನೆ.
ತಕ್ಷಣವೇ ಬ್ಯಾಗ್ ಹೊರತಂದು ಪರಿಶೀಲಿಸಿರುವ ಶಾಲಾ ಶಿಕ್ಷಕರು ಆ ಬ್ಯಾಗ್ನಲ್ಲಿ ಹಾವಿದೆ ಎಂಬುದು ಸತ್ಯವಾಗಿತ್ತು. ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿರುವ ಶಾಲಾ ಶಿಕ್ಷಕರು ಅವರ ತಂದೆಯನ್ನು ಶಾಲೆಗೆ ಕರೆಸಿದ್ದಾರೆ. ಬಳಿಕ ಪೋಷಕರ ಸಹಕಾರದೊಂದಿಗೆ ಸಮೀಪದ ಕಾಡಿಗೆ ನಾಗರಹಾವನ್ನು ಬಿಟ್ಟ ಶಿಕ್ಷಕರು ಹಾವಿನ ರಕ್ಷಣೆ ಮಾಡಿದ್ದಾರೆ. ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆ ಪ್ರಶಂಸಿಸಿದ ಶಿಕ್ಷಕರು- ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದರು. ಹಾವು ಯಾರಿಗೂ ಯಾವ ಹಾನಿಯನ್ನೂ ಮಾಡಿರುವುದಿಲ್ಲ.