ಹೊಸನಗರ

ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚುವ ಹೇಳಿಕೆ ಖಂಡನೀಯ, ಮೊದಲು ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿ: ಹೆಚ್.ಆರ್. ತೀರ್ಥೇಶ್

"ವಿಮಾನ ಹಾರಾಟ ನಡೆಯದಿದ್ದರೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮುಚ್ಚಿ" ಎಂಬ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೇಳಿಕೆಯನ್ನು ಬಿಜೆಪಿ ವಕ್ತಾರ ಹಾಗೂ ರಾಜ್ಯ ಎಂ.ಸಿ.ಎ. ಮಾಜಿ ನಿರ್ದೇಶಕ ಹೆಚ್.ಆರ್. ತೀರ್ಥೇಶ್ ತೀವ್ರವಾಗಿ ಖಂಡಿಸಿದ್ದಾರೆ.

H R Thirthesh

ಹೊಸನಗರ: “ವಿಮಾನ ಹಾರಾಟ ನಡೆಯದಿದ್ದರೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮುಚ್ಚಿ” ಎಂಬ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೇಳಿಕೆಯನ್ನು ಬಿಜೆಪಿ ವಕ್ತಾರ ಹಾಗೂ ರಾಜ್ಯ ಎಂ.ಸಿ.ಎ. ಮಾಜಿ ನಿರ್ದೇಶಕ ಹೆಚ್.ಆರ್. ತೀರ್ಥೇಶ್ ತೀವ್ರವಾಗಿ ಖಂಡಿಸಿದ್ದಾರೆ. ಇದು ಮಲೆನಾಡಿನ ಜನರ ಭಾವನೆಗಳಿಗೆ ಧಕ್ಕೆ ತರುವ ಮತ್ತು ಅಭಿವೃದ್ಧಿ ವಿರೋಧಿ ನಿಲುವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನ ದಶಕಗಳ ಕನಸು:

ಶಿವಮೊಗ್ಗ ವಿಮಾನ ನಿಲ್ದಾಣವು ಸುಲಭವಾಗಿ ನಿರ್ಮಾಣವಾದ ಯೋಜನೆಯಲ್ಲ; ಇದರ ಹಿಂದೆ ಮಲೆನಾಡಿಗರ ದಶಕಗಳ ಕನಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪರಿಶ್ರಮದ ಫಲವಾಗಿ ಈ ನಿಲ್ದಾಣ ತಲೆ ಎತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಆಗಮಿಸಿ ಉದ್ಘಾಟಿಸುವ ಮೂಲಕ ಇಡೀ ದೇಶದ ಗಮನವನ್ನು ಶಿವಮೊಗ್ಗದತ್ತ ಸೆಳೆದಿದ್ದರು. ಇಂತಹ ಹೆಮ್ಮೆಯ ಯೋಜನೆಯನ್ನು ಮುಚ್ಚುವಂತೆ ಮಾತನಾಡುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದು ತೀರ್ಥೇಶ್ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗೆ ಪರಿಹಾರ ಹುಡುಕಿ, ಮುಚ್ಚುವುದಲ್ಲ:

ವಿಮಾನ ಹಾರಾಟದಲ್ಲಿ ತಾತ್ಕಾಲಿಕ ಅಡಚಣೆಗಳಿದ್ದರೆ ಅದನ್ನು ಸರಿಪಡಿಸುವತ್ತ ಗಮನಹರಿಸಬೇಕೇ ಹೊರತು, ನಿಲ್ದಾಣವನ್ನೇ ಮುಚ್ಚುವುದು ಪರಿಹಾರವಲ್ಲ. “ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದರೆ ಆಸ್ಪತ್ರೆಯನ್ನೇ ಮುಚ್ಚುತ್ತೇವೆಯೇ? ಶಾಲೆಯಲ್ಲಿ ಶಿಕ್ಷಕರಿಲ್ಲ ಎಂದರೆ ಶಾಲೆಗೆ ಬೀಗ ಹಾಕುತ್ತೇವೆಯೇ?” ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಶಾಸಕರದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರದ ಮೇಲೆ ಒತ್ತಡ ತಂದು ವಿಮಾನ ಸೇವೆ ಪುನರಾರಂಭಿಸಲು ಶಾಸಕರು ಶ್ರಮಿಸಬೇಕು ಎಂದಿದ್ದಾರೆ.

ರೈತರ ತ್ಯಾಗವನ್ನು ಗೌರವಿಸಿ:

ಮಲೆನಾಡಿನ ಪ್ರಗತಿ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ರೈತರು ತಮ್ಮ ಭೂಮಿಯನ್ನು ನೀಡಿದ್ದಾರೆ ಹೊರತು ನಿಲ್ದಾಣವನ್ನು ಮುಚ್ಚುವುದಕ್ಕಲ್ಲ. ರೈತರ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ವಿಮಾನ ನಿಲ್ದಾಣವನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಮೊದಲು ಸಾಗರ ಕ್ಷೇತ್ರದ ಸಮಸ್ಯೆ ಬಗೆಹರಿಸಿ:

ಅಭಿವೃದ್ಧಿಯ ಬಗ್ಗೆ ಮಾತನಾಡುವ ಶಾಸಕರು ಮೊದಲು ತಮ್ಮದೇ ಸಾಗರ ಕ್ಷೇತ್ರದ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಲಿ. ಕ್ಷೇತ್ರದ ರಸ್ತೆ ಗುಂಡಿಗಳು, ಕುಡಿಯುವ ನೀರಿನ ಅಭಾವ, ರೈತರ ಬೆಳೆ ಹಾನಿ ಪರಿಹಾರ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಕ್ಷೇತ್ರದ ಸಮಸ್ಯೆಗಳನ್ನು ಬದಿಗಿಟ್ಟು ಮಲೆನಾಡಿನ ಹೆಮ್ಮೆಯ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ ಎಂದು ತೀರ್ಥೇಶ್ ಒತ್ತಾಯಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]