ರಿಪ್ಪನ್‌ಪೇಟೆ ; ಸರ್ಕಾರದಲ್ಲಿ ಶಾಸನ ರೂಪಿಸಬೇಕಾದ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪಕ್ಷಗಳ ನಾಯಕರುಗಳು ಹೊಸನಗರ ಕ್ಷೇತ್ರ ರಚನೆಯ ಬಗ್ಗೆ ಪಾದಯಾತ್ರೆ ಪ್ರತಿಭಟನೆಗಳಿಗೆ ಕರೆ ನೀಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಜನಹಿತ ರಂಗದ ರಾಜ್ಯ ಸಂಚಾಲಕ ವಾಟಗೋಡು ಸುರೇಶ್ ಹೇಳಿದರು.
ಗ್ರಾಮ ಪಂಚಾಯಿತ್ ಸಭಾಂಗಣದಲ್ಲಿ ಮಂಗಳಾವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸನಗರ-ರಿಪ್ಪನ್‌ಪೇಟೆ ಭಾಗದ ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ನಾಯಕರ ಗಮನಸೆಳೆಯುವ ಪ್ರಭಾವಿಗಳಿದ್ದಾರೆ. ಎರಡು ಪಕ್ಷಗಳು ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈಗ ಕ್ಷೇತ್ರ ಉಳಿಸಲು ಅಧಿಕಾರಸ್ಥ ನಾಯಕರೇ ಹೊರಟಿದ್ದಾರೆ. ಹಾಗಾದರೆ ಇವರ ಹೋರಾಟ ಯಾರ ವಿರುದ್ದ? ಹಾಗೂ ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸುತ್ತಾರೆಯೆ? ಈ ಜನ ನಾಯಕರು ಸ್ಪಷ್ಟಪಡಿಸಬೇಕು. ಇಂತಹ ಗೊಂದಲಗಳ ನಡುವಳಿಕೆಗಳು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.
ಕ್ಷೇತ್ರ ಪುನರ್ ವಿಗಂಡನೆ ರಾಷ್ಟ್ರೀಯ ನಿಯಮವಾಗಿದ್ದು ಇಲ್ಲಿನವರ ಬೇಡಿಕೆಯಂತೆ ರಾಜ್ಯದಲ್ಲಿ ಒಂದು ಕ್ಷೇತ್ರ ಹೆಚ್ಚಿಸಲು ಅವಕಾಶವಿಲ್ಲ. ಅಂತಹ ಯಾವುದೇ ವಿದೇಯಕಗಳು ಲೋಕಸಭೆಯಲ್ಲಿ ಮಂಡನೆಯಾಗಿಲ್ಲ. ಆದರೂ ರಾಜಕೀಯ ಅಸ್ಥಿತ್ವಕ್ಕಾಗಿ ಕೆಲವರು ಅವಸರದಲ್ಲಿದ್ದಾರೆ. ದೆಹಲಿ ಸಂಸತ್ ಭವನದಲ್ಲಿ ಆಗುವ ಕೆಲಸವನ್ನು ರಿಪ್ಪನ್‌ಪೇಟೆಯ ಗೋಲಿ ಆಟದ ಮೈದಾನದಲ್ಲಿ ಹೇಗೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಸತ್ಯವನ್ನು ಮರೆಮಾಚಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಆಗಬಾರದು. ತಾಲ್ಲೂಕಿನಲ್ಲಿ ಮುಳಗಡೆ, ಬಗರ್ ಹುಕುಂ, ವಿದ್ಯುತ್, ಅರಣ್ಯ ಭೂಮಿಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಪಕ್ಷ ಬೇಧ ಮರೆತು ಒಂದಾಗಿ ನ್ಯಾಯ ಒದಗಿಸುವುದನ್ನು ಬಿಟ್ಟು ರಾಜಕೀಯ ಪ್ರೇರಿತ ಹೋರಾಟ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತಾಗಬಾರದು. ತಾಲ್ಲೂಕಿನ ಜನರಿಗೆ ಕ್ಷೇತ್ರದ ಅಸ್ತಿತ್ವದ ಅಗತ್ಯಕ್ಕೆ ನಮ್ಮ ಬೆಂಬಲವಿದೆ. ಆದರೆ ಕಳೆದುಕೊಳ್ಳುವಾಗ ಸುಮ್ಮನೆ ಇದ್ದು ಅಪ್ರಸ್ತುತ ಸಂದರ್ಭದಲ್ಲಿ ಹೋರಾಟ ಅರ್ಥ ಹೀನವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯ ಅಮ್ಮಿರ್‌ಹಂಜಾ ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





