ಇದು ಕಾಳಿಂಗ ಸರ್ಪಗಳ ಮಿಲನ ಕಾಲ

Written by malnadtimes.com

Published on:

ಕಾಳಿಂಗ ಸರ್ಪಗಳು ನಮ್ಮ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಕಂಡುಬರುತ್ತವೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕಾಳಿಂಗಗಳು ಜನರ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಈಗ ನೋಡಬಹುದು.

WhatsApp Group Join Now
Telegram Group Join Now
Instagram Group Join Now

ಹೌದು! ಈಗ ಎಲ್ಲಾ ಕಡೆ ಕಾಳಿಂಗ ಸರ್ಪಗಳು ತಮ್ಮ ಸಂತಾನವನ್ನು ಮುಂದುವರಿಸಲು ಹೆಣೆಯಾಡುವುದು ಅಥವಾ ಮಿಲನ ಕ್ರಿಯೆಯಲ್ಲಿ ತೊಡಗುವುದರಿಂದ ಹೆಚ್ಚಾಗಿ ಜನರ ಕಣ್ಣಿಗೆ ಬೀಳುತ್ತಿವೆ. ಕಾಳಿಂಗ ಸರ್ಪಗಳು ಮನುಷ್ಯನಿಂದ ದೂರವಿರಲು ಪ್ರಯತ್ನಿಸುತ್ತವೆ, ಆಹಾರ ಅಥವಾ ಹೆಣ್ಣು ಹಾವುಗಳನ್ನು ಹುಡುಕಿ ಬಂದಾಗ ಮನುಷ್ಯ ಅಥವಾ ಸಾಕು ಪ್ರಾಣಿಗಳಿಗೆ ಹೆದರಿ ಮನೆ, ಕೊಟ್ಟಿಗೆ, ಕಟ್ಟಿಗೆ ರಾಶಿಯೊಳಗೆ ಅವಿತುಕೊಳ್ಳುತ್ತವೆ.

ಕಾಳಿಂಗ ಸರ್ಪಗಳು ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ, ಸಂತಾನೋತ್ಪತ್ತಿಗೆ ಸಿದ್ದವಾದ ಹೆಣ್ಣು ಹಾವು ರಸಾಯನಿಕವನ್ನು (Sex pheromone) ಹೊರಹಾಕಿ ಗಂಡನ್ನು ಸೆಳೆಯುತ್ತದೆ, ಹೆಣ್ಣು ಹಾವು ಸಂಚರಿಸಿದ ಕಡೆಗಳಲ್ಲಿ ವಾಸನೆ ಹರಡಿರುವುದನ್ನು ಗಮನಿಸುವ ಗಂಡುಗಳು ಮಿಲನ ಕ್ರಿಯೆ ನಡೆಸಲು ಹೆಣ್ಣನ್ನು ಹಿಂಬಾಲಿಸುತ್ತವೆ.

ಹೆಣ್ಣು ಕಾಳಿಂಗಗಳು 4-5 ಕಿ.ಮೀ ವ್ಯಾಪ್ತಿಯಲ್ಲೂ ಗಂಡುಗಳು 7-8 ಕಿ.ಮೀ ವ್ಯಾಪ್ತಿಯೊಳಗೆ ವಾಸಿಸುತ್ತವೆ, ಆದರೆ ಮಿಲನದ ತಿಂಗಳಲ್ಲಿ ಗಂಡುಗಳು 10-15 ಕಿ.ಮೀ ಆಚೆಗೂ ಹೋಗಿ ಹೆಣ್ಣನ್ನು ಹುಡುಕಿ ತಮ್ಮ ಮೂಲ ನೆಲೆಗೆ ವಾಪಾಸಾಗಬಲ್ಲವು, ಇದೇ ಕಾರಣದಿಂದ ಹೆಣ್ಣಿರುವ ಸ್ಥಳದಲ್ಲಿ ಬೇರೆ ಬೇರೆ ಕಡೆಗಳಿಂದ ಬಂದ 5-6 ಗಂಡು ಕಾಳಿಂಗಗಳು ಒಂದೇ ಕಡೆ ಕಾಣಿಸಿಕೊಳ್ಳಬಹುದು. ಅಷ್ಟು ದೂರದಿಂದ ಗಂಡು ಕಾಳಿಂಗಗಳು ಬಂದರೂ, ಹೆಣ್ಣಿನ ಜೊತೆ ಮಿಲನ ಕ್ರಿಯೆ ಅಷ್ಟು ಸುಲಭವಲ್ಲ!.

ಹೆಣ್ಣಿಗಾಗಿ ಎರಡು ಗಂಡು ಹಾವುಗಳ ಕುಸ್ತಿ.

ಹೌದು, ಪ್ರಾಣಿ ಪ್ರಪಂಚದಲ್ಲಿ ಬಲಶಾಲಿ ಗಂಡುಗಳು ಹೆಣ್ಣಿಗಾಗಿ ಇತರ ಗಂಡುಗಳ ಜೊತೆ ಹೋರಾಟ ಮಾಡುವಂತೆ, ಹೆಣ್ಣು ಕಾಳಿಂಗ ಸರ್ಪದ ವಾಸನೆ ಹಿಡಿದು ಬರುವ ಸುತ್ತಮುತ್ತಲಿನ ಗಂಡುಗಳು ಹೆಣ್ಣಿಗಾಗಿ ಭೀಕರ ಹೋರಾಟ (Combat) ಮಾಡುತ್ತವೆ. ಒಂದಕ್ಕೊಂದು ಸುತ್ತಿಕೊಳ್ಳುತ್ತಾ ಹುರುಪೆಗಳನ್ನು ಪರಸ್ಪರ ಉಜ್ಜುತ್ತಾ ಒಂದೆರಡು ಗಂಟೆ ಅಥವಾ ಐದಾರು ಗಂಟೆಗಳ ಕಾಲ ಕುಸ್ತಿ ಮಾಡುತ್ತವೆ, ಸೋತ ಗಂಡು ತನ್ನ ಮೂಲ ನೆಲೆಗೆ ಅಥವಾ ಇನ್ನೊಂದು ಹೆಣ್ಣನ್ನು ಹುಡುಕಿ ವಾಪಾಸು ಹೋದರೆ ಗೆದ್ದ ಗಂಡು ಹೆಣ್ಣಿನ ಜೊತೆ ವಿಲನಕ್ರಿಯೆಯಲ್ಲಿ ತೊಡಗುತ್ತದೆ, ಕೆಲವು ಸಲ ಒಂದು ಗಂಡು ನಾಲ್ಕೈದು ಗಂಡುಗಳನ್ನು ಎದುರಿಸಬೇಕಾದ ಸಂದರ್ಭ ಎದುರಾಗಬಹುದು. ಗಂಡು ಹಾವುಗಳ ಕುಸ್ತಿಯನ್ನು ಕೆಲವರು ಹೆಣೆಯಾಡುವುದು ಅಥವಾ ಮಿಲನ ಎಂದು ತಪ್ಪು ತಿಳಿಯುತ್ತಾರೆ.

ಈಗ ನಿಮ್ಮ ಮನೆಯ ಸುತ್ತಮುತ್ತ ಎರಡು ಮೂರು ಕಾಳಿಂಗಗಳು ಕಾಣಿಸಿಕೊಳ್ಳುತ್ತಿವೆ ಎಂದರೆ ಅಲ್ಲೆಲ್ಲೊ ಹೆಣ್ಣು ಹಾವು ಇದೆ ಎಂದರ್ಥ.

ಹೆಣ್ಣು ಕಾಳಿಂಗ ಹಿಡಿದು ಸಾಗಿಸಿದರೆ ಸಮಸ್ಯೆ ಶುರು!

ಹೌದು, ಒಂದು ವೇಳೆ ಹೆಣ್ಣು ಹಾವು ಮನೆಯೊಳಗೆ ಅಥವಾ ಕೊಟ್ಟಿಗೆಯಲ್ಲಿ ಅವಿತು ಕುಳಿತಾಗ ಸೆರೆ ಹಿಡಿದು ಸಾಗಿಸಿದರೆ ಸುತ್ತಮುತ್ತಲಿನ ಐದಾರು ಗಂಡುಗಳು ಮನೆಯ ಅಕ್ಕಪಕ್ಕ ಕಾಣಿಸಿಕೊಳ್ಳಬಹುದು, ಹೆಣ್ಣು ಸಂಚರಿಸಿದ ಕೊನೆವರೆಗೂ ವಾಸನೆ ಹಿಡಿದು ಹೋಗುವ ಗಂಡುಗಳಿಗೆ ಹೆಣ್ಣು ಮುಂದೆ ಎಲ್ಲಿಗೆ ಹೋಯಿತು ಎಂಬ ಮಾಹಿತಿ (ವಾಸನೆ) ಸಿಗದೆ ಗೊಂದಲಕ್ಕೀಡಾಗಿ ಅಲ್ಲಲ್ಲೆ ಸುತ್ತುತ್ತದೆ, ಇಂತಹ ಸಂದರ್ಭಗಳಲ್ಲಿ ಹೆಣ್ಣನ್ನು ಸೆರೆ ಹಿಡಿವ ಬದಲಾಗಿ ಪರಿಣಿತ ಉರಗ ಸಂರಕ್ಷಕರನ್ನು ಕರೆಸಿ ಹೆಣ್ಣನ್ನು ಹೊರ ಹೋಗುವಂತೆ ಮಾಡಿದರೆ ಅದು ಹೋದ ಮಾರ್ಗವನ್ನು ಗಂಡುಗಳು ಅನುಸರಿಸಿ ಸಾಗುತ್ತವೆ.

ಕಾಳಿಂಗ ಸರ್ಪಗಳು ವರ್ಷದ ಸೀಮಿತ ತಿಂಗಳಲ್ಲಿ ಮಾತ್ರ (ಮಾರ್ಚ್-ಏಪ್ರಿಲ್) ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ,
ಈ ಸಂದರ್ಭಗಳಲ್ಲಿ ಅವುಗಳ ಮಿಲನಕ್ಕೆ ಅಡ್ಡಿಪಡಿಸದೆ ಕೆಳಗಿನ ಕ್ರಮಗಳನ್ನು ಅನುಸರಿಸೋಣ.

  • ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅಕ್ಕಪಕ್ಕದ ಮೂರ್ನಾಲ್ಕು ಗಂಡು ಕಾಳಿಂಗಗಳು ಹುಡುಕಿ ಬರುವುದು ಸಹಜ, ಇದಕ್ಕೆ ಭಯ ಬೇಡ.
  • ಹೆಣ್ಣನ್ನು ಹುಡುಕಿ ಬರುವ ಗಂಡುಗಳ ನಡುವೆ ಹೋರಾಟ ಅಥವಾ ಕುಸ್ತಿ (Combat)ನಡೆಯುತ್ತದೆ, ಇದಕ್ಕೆ ಅಡ್ಡಿಪಡಿಸಬಾರದು. ಸೋತ ಗಂಡು ತಾನಾಗಿಯೇ ಜಾಗ ಖಾಲಿ ಮಾಡುತ್ತದೆ.
  • ಹೆಣ್ಣು ಕಾಳಿಂಗ ತೋಟ ಅಥವಾ ಮನೆಯ ಅಕ್ಕಪಕ್ಕ ಬಂದು ಹೋಗಿದ್ದರೆ ಅದರ ವಾಸನೆಗೆ ಅಕ್ಕಪಕ್ಕದ ಗಂಡು ಕಾಳಿಂಗಗಳು ಹುಡುಕಿ ಬರುತ್ತವೆ, ಗಾಬರಿ ಬೇಡ.
  • ಹೆಣ್ಣು ಕಾಳಿಂಗ ಸರ್ಪಗಳು ಬೆದೆಗೆ ಬಂದಿರುವ ಈ ಸಮಯದಲ್ಲಿ, ಮನೆ ತೋಟದ ಅಕ್ಕಪಕ್ಕ ಬಂದಾಗ ಹಾವನ್ನು ಹಿಡಿಸಲೇಬೇಡಿ ಕಾರಣ ಅಲ್ಲಿಗೆ ಬಂದ ಹೆಣ್ಣನ್ನು ಹಿಡಿದರೆ ಅಕ್ಕಪಕ್ಕದ ಗಂಡುಗಳು ಹೆಣ್ಣನ್ನು ಹುಡುಕುತ್ತಾ ನಿಮ್ಮ ತೋಟ ಅಥವಾ ಮನೆಯ ಸಮೀಪವೇ ಸುತ್ತುತ್ತಿರುತ್ತವೆ.
  • ಕಾಳಿಂಗಗಳು ಕಾಣಿಸಿಕೊಂಡರೆ ತಾನಾಗಿಯೇ ಹೋಗಲು ಬಿಡಿ, ಒಂದು ವೇಳೆ ಅಲ್ಲಿ ಬಂದಿರುವ ಹಾವು ಹೆಣ್ಣಾಗಿದ್ದರೆ ಆ ಹೆಣ್ಣನ್ನು ಹುಡುಕಿ ಬರುವ ಇತರ ಗಂಡುಗಳು, ಹೆಣ್ಣು ಹೋದ ದಾರಿಯಲ್ಲೇ ಸಾಗಿ ಹೋಗುತ್ತದೆ. ಆಗ ನಮಗೆ ಹಾವು ಹಿಡಿಸುವ ಅವಶ್ಯಕತೆ ಬರುವುದಿಲ್ಲ.
  • ಒಂದು ವೇಳೆ ಮನೆ, ಕೊಟ್ಟಿಗೆ ಒಳಗೆ ಕಾಳಿಂಗಗಳು ಬಂದರೆ ಆಗ ಹಿಡಿಸುವುದು ಅನಿವಾರ್ಯ, ಹಿಡಿದ ನಂತರ ಹತ್ತಿರದಲ್ಲೇ ಅದನ್ನು ಬಿಡುಗಡೆಗೊಳಿಸಿದರೆ, ಹತ್ತಿರದಲ್ಲಿರುವ ಕಾಳಿಂಗಗಳು ಪುನಃ ಸಂಪರ್ಕ ಸಾಧಿಸಬಲ್ಲವು.
  • ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುವುದು ಮನುಷ್ಯನೂ ಸೇರಿ ಎಲ್ಲಾ ಜೀವಿಗಳ ಪ್ರಕೃತಿ ಸಹಜ ಗುಣ ಇದಕ್ಕೆ ನಮ್ಮಿಂದ ಅಡ್ಡಿಪಡಿಸುವುದು ಬೇಡ.
  • ಕಾಳಿಂಗಗಳು ಜೋಡಿಯಾದ ಮೇಲೆ ಒಂದೇ ಜಾಗದಲ್ಲಿ ಎರಡರಿಂದ ಮೂರು ವಾರ ಇದ್ದು ಮಿಲನ ಕ್ರಿಯೆ ನಡೆಸಿ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆ.
  • ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದ ಅಜಯ್ ಗಿರಿ ಮತ್ತು ತಂಡವು ಜನರಿಗೆ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕಾಳಿಂಗ ಸರ್ಪಗಳು ಕಂಡಾಗ ಅವರು ಉಚಿತ ಸೇವೆಯನ್ನು ನೀಡುವುದರ ಜೊತೆಗೆ ಕಾಳಿಂಗ ಸರ್ಪಗಳ ಜೀವನ ಶೈಲಿ ಹಾವುಗಳು ಕಂಡಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಾರೆ, ಇದರ ಪರಿಣಾಮವಾಗಿ ಮಲೆನಾಡಿನ ಬಹುತೇಕ ಕಡೆಗಳಲ್ಲಿ ಮಾನವ ಹಾಗು ಕಾಳಿಂಗ ಸರ್ಪಗಳ ಸಂಘರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ.
  • ಹಾವುಗಳು ಕಂಡಾಗ ಅರಣ್ಯ ಇಲಾಖೆ ಅಥವಾ ಪರಿಣಿತ ಉರಗ ಸಂರಕ್ಷಕರಿಗೆ ಮಾತ್ರ ಕರೆಮಾಡಿ ಮಾಹಿತಿ ನೀಡಿ.
  • ಕಾಳಿಂಗ ಸರ್ಪಗಳು ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ, ಇವುಗಳ ಬಗ್ಗೆ ಅನಗತ್ಯ ಭಯ ಬೇಡ.
  • ಕಾಳಿಂಗ ಸರ್ಪಗಳು ಕಂಡುಬಂದರೆ ಹತ್ತಿರದ ಅರಣ್ಯ ಇಲಾಖೆ ಅಥವಾ ಅಜಯ್ ಗಿರಿ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರ 9353499832, 9483166263, ನಾಗರಾಜ್ ಬೆಳ್ಳೂರು 9341461867, 7676623759 ಇವರನ್ನು ಸಂಪರ್ಕಿಸಿ.

Leave a Comment