ತೀರ್ಥಹಳ್ಳಿ: ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಹುದ್ದೆಗೆ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಭಾನುಪ್ರಕಾಶ್ ಜೆ. ಅವರು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಕೇಡರ್‌ಗೆ ಸೇರಿದ ಯುವ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ತೀರ್ಥಹಳ್ಳಿಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಉಪವಿಭಾಗದ ಡಿವೈಎಸ್ಪಿ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ.
ತೀರ್ಥಹಳ್ಳಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರವಿಂದ ಕಲಗುಜ್ಜಿ ಅವರು ನಿವೃತ್ತರಾದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ಖಾಲಿ ಉಳಿದಿದ್ದ ಈ ಸ್ಥಾನಕ್ಕೆ ಸರ್ಕಾರ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಿದೆ.
ತೀರ್ಥಹಳ್ಳಿ ಉಪವಿಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಪೊಲೀಸ್ ಆಡಳಿತದ ಸಮನ್ವಯ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಭಾನುಪ್ರಕಾಶ್ ಜೆ. ನಿರ್ವಹಿಸಲಿದ್ದಾರೆ.
ಯುವ ಐಪಿಎಸ್ ಅಧಿಕಾರಿಯ ನೇಮಕದಿಂದ ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಆಡಳಿತಕ್ಕೆ ಮತ್ತಷ್ಟು ಚುರುಕು ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

