ಮಲೆನಾಡಿನಾದ್ಯಂತ ಮುಂದುವರೆದ ಧಾರಾಕಾರ ಮಳೆ ; ಸಾಲು-ಸಾಲು ಅವಾಂತರ

Written by Mahesh Hindlemane

Published on:

ಚಿಕ್ಕಮಗಳೂರು ; ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು ಪ್ರವಾಸಿ ಕಾರು ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಗಾಳಿ-ಮಳೆಗೆ ಮತ್ತೊಂದು ಕಾರು ಪಲ್ಟಿಯಾಗಿ ಹೇಮಾವತಿ ನದಿಯ ಉಪನದಿಯ ಹಳ್ಳಕ್ಕೆ ಬಿದ್ದಿದೆ.

ಭಾರೀ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಸಮಾಜ ಸೇವಕ ಆರೀಫ್ ಅವರಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದೆ.

ಸೊಂಟಕ್ಕೆ ಹಗ್ಗ ಕಟ್ಟಿ ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಬಣಕಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಣಕಲ್‌ನಿಂದ ಕೊಟ್ಟಿಗೆಹಾರ ಮಾರ್ಗದಲ್ಲಿ ಒಟ್ಟು ಮೂರು ಕಾರುಗಳು ಅಪಘಾತಕ್ಕೆ ಈಡಾಗಿವೆ. ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಕಸ್ಕೇಬೈಲ್ ಬಳಿ ರಸ್ತೆಗೆ ಅಡ್ಡಲಾಗಿ ‌ಮರ ಬಿದ್ದಿರುವುದರಿಂದ ಬೇಲೂರು‌ – ಚೀಕನಹಳ್ಳಿ – ಮೂಡಿಗೆರೆ ರಸ್ತೆ ‌ಸಂಚಾರಕ್ಕೆ ಅಡ್ಡಿಯಾಗಿದೆ.

ಕಳಸ, ಕೊಪ್ಪ, ಬಾಳೆಹೊನ್ನೂರು, ಆಲ್ದೂರು, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ಮಳೆ ಆರ್ಭಟ ಮುಂದುವರಿದಿದೆ. ಹಲವು ಮನೆಗಳ ಮೇಲೆ ಮರಗಳು ಉರುಳಿವೆ. ವಿದ್ಯುತ್ ಕಂಬಗಳೂ ನೆಲಕಚ್ಚಿವೆ. ಬಾಬಾಬುಡನ್‌ಗಿರಿ ರಸ್ತೆಯ ಕವಿಕಲ್ ಗಂಡಿ ಬಳಿ ಮಣ್ಣು ಜರಿದಿದ್ದು, ಆತಂಕ ಮನೆ ಮಾಡಿದೆ. ಹೆಚ್ಚು ಕುಸಿಯದಂತೆ ಸುರಕ್ಷತಾ ಕ್ರಮಗಳನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕೈಗೊಂಡಿದ್ದು, ಮರಳು ಮೂಟೆಗಳನ್ನು ಜೋಡಿಸಿದ್ದಾರೆ.

About The Author

Leave a Comment