ಹೊಸನಗರ

ಹೊಸನಗರ : ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ

ವೀರಶೈವ ಪತ್ತಿನ ಸಹಕಾರ ಸಂಘವು ರೈತರು ಹಾಗೂ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ₹9,56,630 ನಿವ್ವಳ ಲಾಭ ಗಳಿಸಿದೆ ಎಂದು ಸಾಗರ ಉಪ ನಿಬಂಧಕ ಹಾಗೂ ಸಂಘದ ವಿಶೇಷಾಧಿಕಾರಿ ಡಿ.ವಿ. ಶ್ರೀನಿವಾಸ್ ತಿಳಿಸಿದರು.

ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ Veerashaiva

ಹೊಸನಗರ: ಪಟ್ಟಣದ ವೀರಶೈವ ಪತ್ತಿನ ಸಹಕಾರ ಸಂಘವು ರೈತರು ಹಾಗೂ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ₹9,56,630 ನಿವ್ವಳ ಲಾಭ ಗಳಿಸಿದೆ ಎಂದು ಸಾಗರ ಉಪ ನಿಬಂಧಕ ಹಾಗೂ ಸಂಘದ ವಿಶೇಷಾಧಿಕಾರಿ ಡಿ.ವಿ. ಶ್ರೀನಿವಾಸ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಜೆಸಿಎಂ ರಸ್ತೆಯಲ್ಲಿರುವ ಸಂಘದ ಸ್ವಂತ ಕಟ್ಟಡದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ಪ್ರಗತಿಗೆ ಷೇರುದಾರರ ಶಿಸ್ತು, ಸಂಯಮ ಹಾಗೂ ಸಹಕಾರ ಅಗತ್ಯ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ಸಭೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸದೆ ಸಂಸ್ಥೆಯ ಹಿತದೃಷ್ಟಿಯಿಂದ ಸಹಕರಿಸಬೇಕು ಎಂದರು.

ಸಂಸ್ಥೆಯಲ್ಲಿ ಹಣ ದುರುಪಯೋಗವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಹಕಾರ ಕಾಯ್ದೆ 65ರ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಒಂದೆರಡು ವಾರಗಳಲ್ಲಿ ವರದಿ ನಿರೀಕ್ಷಿಸಲಾಗಿದೆ. ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ದುರ್ಬಳಕೆಯಾದ ಹಣವನ್ನು ವಸೂಲಿ ಮಾಡಲಾಗುವುದು. ಹೀಗಾಗಿ ಸದಸ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಠೇವಣಿ ಮರುಪಾವತಿ ಹಾಗೂ ಹೆಚ್ಚಿನ ಬಡ್ಡಿದರಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖಾ ವರದಿ ಬಂದ ಬಳಿಕ ಈ ಕುರಿತು ಸ್ಪಷ್ಟನೆ ನೀಡಲಾಗುವುದು ಎಂದರು. ಸಂಸ್ಥೆಯಲ್ಲಿ ಅಗತ್ಯ ಹಣಕಾಸಿನ ಭದ್ರತೆಯಿದ್ದು, ಸದಸ್ಯರಿಗೆ ಸಾಲದ ರೂಪದಲ್ಲಿ ಹಣ ವಿತರಿಸಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಮಾತನಾಡಿ, 19 ವರ್ಷಗಳ ಹಿಂದೆ 585 ಸದಸ್ಯರು ಹಾಗೂ ₹7 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಇದೀಗ 1,975 ಸದಸ್ಯರನ್ನು ಹೊಂದಿದೆ. ಸ್ವಂತ ಕಟ್ಟಡ ನಿರ್ಮಿಸಿಕೊಂಡಿರುವ ಸಂಸ್ಥೆಯು ಚಿನ್ನದ ಸಾಲ, ಜಾಮೀನು ಸಾಲ, ವಾಹನ ಸಾಲ, ಠೇವಣಿ ಆಧಾರಿತ ಸಾಲ ಹಾಗೂ ಭದ್ರತಾ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಉಳಿತಾಯ ಖಾತೆ, ಪಿಗ್ಮಿ, ನಿಗದಿತ ಠೇವಣಿ ಹಾಗೂ ‘ಶಿವ ವಿಕಾಸ ಪತ್ರ’ ಸೇರಿದಂತೆ ವಿವಿಧ ಯೋಜನೆಗಳು ಲಭ್ಯವಿದ್ದು, ಸಾರ್ವಜನಿಕರು ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಷೇರುದಾರರಾದ ವರಕೋಡು ಈಶ್ವರಪ್ಪ ಗೌಡ, ಹೆಚ್.ಪಿ. ನಂಜುಂಡಪ್ಪ, ಮಾವಿನಕಟ್ಟೆ ಶಿವಾನಂದ, ಬಸಪ್ಪ, ಎಂ.ಎನ್. ಶೇಖರಪ್ಪ, ಸತೀಶ ಕೆ.ಎಸ್., ಹೆಚ್. ಮಲ್ಲಿಕ, ರಾಜಪ್ಪ ಗೌಡ, ಸಿದ್ಧವೀರಪ್ಪ, ಯೋಗೇಶ್‌ಕುಮಾರ್, ಜ್ಯೋತಿ ಪ್ರಶಾಂತ್, ಮಂಜಪ್ಪ ಸೇರಿದಂತೆ ಹಲವರು, ಸಿಬ್ಬಂದಿಗಳಾದ ಅರ್ಪಿತ, ಲೋಕೇಶ್, ಹೆಚ್.ಎಸ್. ನಿರಂಜನ, ಹರಿದ್ರಾವತಿ ಅಶೋಕ ಗೌಡ, ವೇದಾಂತಪ್ಪ ಗೌಡ, ಮಾವಿನಕಟ್ಟೆ ಪ್ರಕಾಶ್ ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!