ಹೊಸನಗರ: ತೋಟದ ಕೆಲಸದಲ್ಲಿ ನಿರತರಾಗಿದ್ದ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿದ ಪರಿಣಾಮ ಅವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ನಗರ ಸಮೀಪದ ಕಟ್ಟಿಕೊಪ್ಪ ಗ್ರಾಮದ ದೊಡ್ಡಿಮನೆಯಲ್ಲಿ ಮಂಗಳವಾರ ಸಂಭವಿಸಿದೆ.
ಮೃತ ದುರ್ದೈವಿಯನ್ನು ಶ್ರೀಲತಾ (56) ಎಂದು ಗುರುತಿಸಲಾಗಿದೆ. ಶ್ರೀಲತಾ ಅವರು ತಮ್ಮ ಪತಿ ಡಿ.ವಿ. ನಾಗರಾಜ್ ಅವರೊಂದಿಗೆ ತಮ್ಮ ಅಡಕೆ ತೋಟದಲ್ಲಿ ಉದುರಿದ್ದ ಅಡಿಕೆ ಹಾಗೂ ಸೋಗೆಗಳನ್ನು ಹೆಕ್ಕುತ್ತಿದ್ದರು. ಈ ಸಂದರ್ಭದಲ್ಲಿ ಅಡಗಿದ್ದ ನಾಗರಹಾವೊಂದು ಅವರ ಕೈಬೆರಳಿಗೆ ಕಚ್ಚಿದೆ. ತಕ್ಷಣವೇ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಅಲ್ಲಿನ ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ದುರದೃಷ್ಟವಶಾತ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಪತಿ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

