ಹೊಸನಗರ

ವರ್ಷವಿಡೀ ಹೈನುಗಾರಿಕೆ ಕೈಹಿಡಿಯಲು ಇಲ್ಲಿನ ರೈತರು ಬಲಿಪಾಡ್ಯಮಿಯಂದು ಮಾಡುವುದೇನು?

ದೀಪಾವಳಿಯ ಪ್ರಮುಖ ಪರ್ವದಿನವಾದ ಬಲಿಪಾಡ್ಯಮಿಯಂದು ರಿಪ್ಪನ್‌ಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಮಧೇನು ಗೋಮಾತೆಯನ್ನು ಪೂಜಿಸುವ ‘ಗೋಪೂಜೆ’ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.

Ripponpete Deepavali

ರಿಪ್ಪನ್‌ಪೇಟೆ: ದೀಪಾವಳಿಯ ಪ್ರಮುಖ ಪರ್ವದಿನವಾದ ಬಲಿಪಾಡ್ಯಮಿಯಂದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಮಧೇನು ಗೋಮಾತೆಯನ್ನು ಪೂಜಿಸುವ ‘ಗೋಪೂಜೆ’ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು. ಕೃಷಿ ಕಾಯಕದ ಬೆನ್ನೆಲುಬಾಗಿರುವ ಜಾನುವಾರುಗಳಿಗೆ ಕೃತಜ್ಞತೆ ಅರ್ಪಿಸುವ ಈ ಹಬ್ಬದಲ್ಲಿ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನ ಸಾಂಪ್ರದಾಯಿಕ ಆಚರಣೆ:

ಮುಂಜಾನೆಯೇ ಎದ್ದು ಮನೆ-ಅಂಗಳಗಳನ್ನು ಸ್ವಚ್ಛಗೊಳಿಸಿದ ಮಹಿಳೆಯರು, ಜಗುಲಿ ಮತ್ತು ಹೊಸ್ತಿಲಿಗೆ ಜೇಡಿಮಣ್ಣು ಹಾಗೂ ಕಾವಿಯ ಚಿತ್ತಾರ ಬಿಡಿಸಿ, ‘ತುರಬೊಟ್ಟು’ ರಂಗೋಲಿಗಳಿಂದ ಸಿಂಗರಿಸಿದ್ದರು. ಮನೆಯ ಸದಸ್ಯರೆಲ್ಲರೂ ಸಾಂಪ್ರದಾಯಿಕ ಎಣ್ಣೆಸ್ನಾನ ಮುಗಿಸಿ, ರೇಷ್ಮೆ ಸೀರೆ ಹಾಗೂ ನೂತನ ವಸ್ತ್ರಗಳನ್ನು ಧರಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು.

ಮನೆತುಂಬಿದ ಕಾಮಧೇನು:

ಮನೆಯ ಹಿರಿಯರು ಕೊಟ್ಟಿಗೆಯಲ್ಲಿದ್ದ ಹಸು ಹಾಗೂ ಕರುಗಳನ್ನು ಮೈತೊಳೆದು, ಹೊಸ ಹಗ್ಗದಿಂದ (ಕಣಿ) ಬಂಧಿಸಿ ಮಂಗಳವಾದ್ಯ-ಆರತಿಗಳೊಂದಿಗೆ ಭಕ್ತಿಪೂರ್ವಕವಾಗಿ ಮನೆಯೊಳಗೆ ಕರೆತಂದರು. ಗೋವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಮೈಮೇಲೆ ಅರಿಶಿನ-ಕುಂಕುಮದ ಚಿತ್ತಾರ ಮೂಡಿಸಿ, ಹಳದಿ-ಕೇಸರಿ ಚಂಡುಹೂವಿನ ಹಾರಗಳಿಂದ ಅಲಂಕರಿಸಲಾಯಿತು. ಹಣೆಗೆ ತಿಲಕವಿಟ್ಟು, ಕೊರಳಿಗೆ ಮಲೆನಾಡಿನ ಸಾಂಪ್ರದಾಯಿಕ ತಿನಿಸಾದ ‘ಚಪ್ಪೆ ರೊಟ್ಟಿ’ ಹಾಗೂ ಕೊಟ್ಟೆಕಡಬುಗಳ ಮಾಲೆ ಹಾಕಿ ಪೂಜಿಸಲಾಯಿತು. ಮುಕ್ಕೋಟಿ ದೇವತೆಗಳ ಸ್ವರೂಪಿಯಾದ ಗೋಮಾತೆಗೆ ಬೆಲ್ಲ, ಅಕ್ಕಿ, ಗೋಧಿ ಹಾಗೂ ವಿಶೇಷ ನೈವೇದ್ಯವನ್ನು ತಿನ್ನಿಸಿ ಮಂಗಳಾರತಿ ಬೆಳಗಲಾಯಿತು.

ರಿಪ್ಪನ್‌ಪೇಟೆಯಲ್ಲಿ ಬರುವೆ ಗ್ರಾಮ ಚೌಡೇಶ್ವರಿ ಬೀದಿಯಲ್ಲಿನ ಪತ್ರಕರ್ತ ಬಸವರಾಜ ಮನೆಯಲ್ಲಿ ಬಲಿಪಾಡ್ಯಮಿ ಹಬ್ಬವನ್ನು ಅವರ ಪತ್ನಿ ಹೆಚ್.ಜೆ.ಶಶಿಕಲಾ ಶ್ರದ್ದಾಭಕ್ತಿಯಿಂದ ಗೋಪೂಜೆ ಮಾಡಿದರು.

ವಿಶಿಷ್ಟ ಜಾನಪದ ನಂಬಿಕೆಗಳು:

ಕಡಗೋಲಿಗೆ ದಾರದ ರಕ್ಷೆ: ಮುಂಜಾನೆ ಗೋವಿಗೆ ಕಟ್ಟಲಾದ ಹೂವಿನ ಹಾರ ಮತ್ತು ಕೊಟ್ಟೆಕಡಬಿನ ದಾರವನ್ನು ಸಂಜೆ ಜೋಪಾನವಾಗಿ ಬಿಚ್ಚಿ, ಮನೆಯ ಮೊಸರು ಕಡೆಯುವ ಕಡಗೋಲಿಗೆ ಕಟ್ಟುವ ವಿಶಿಷ್ಟ ಪದ್ಧತಿ ಇಲ್ಲಿದೆ. ಹೀಗೆ ಮಾಡುವುದರಿಂದ ವರ್ಷವಿಡೀ ಹೈನುಗಾರಿಕೆ ಸಮೃದ್ಧವಾಗಿ, ಮನೆಯಲ್ಲಿ ಹಾಲು-ಮೊಸರು-ಬೆಣ್ಣೆಗೆ ಕೊರತೆಯಾಗುವುದಿಲ್ಲ ಎಂಬ ಬಲವಾದ ನಂಬಿಕೆಯಿದೆ.

ದೃಷ್ಟಿ ನಿವಾರಣೆಯ ಓಕುಳಿ: ಸಂಜೆ ಜಾನುವಾರುಗಳು ಮೇಯ್ದು ಮನೆಗೆ ಮರಳುವಾಗ, ಕೊಟ್ಟಿಗೆಯ ಬಾಗಿಲಿನಲ್ಲಿ ಒನಕೆ ಹಾಗೂ ಪೊರಕೆಯನ್ನು ಅಡ್ಡಲಾಗಿ ಇಟ್ಟು, ಕೆಂಪು ಬಣ್ಣದ ಓಕುಳಿ ನೀರನ್ನು ಸಿಂಪಡಿಸಿ ಒಳಗೆ ಬರಮಾಡಿಕೊಳ್ಳಲಾಯಿತು. ಇದು ದುಷ್ಟ ಶಕ್ತಿಗಳ ನಿವಾರಣೆ ಹಾಗೂ ಜಾನುವಾರುಗಳಿಗೆ ರೋಗರುಜಿನಗಳು ತಗುಲದಿರಲಿ ಎಂಬ ಹಾರೈಕೆಯ ಪ್ರತೀಕವಾಗಿದೆ.

ಹಳ್ಳಿ-ಪಟ್ಟಣಗಳೆಂಬ ಭೇದವಿಲ್ಲದೆ ಕೃಷಿಕ ಸಂಸ್ಕೃತಿಯ ಜೀವನಾಡಿಯಾದ ಗೋಪೂಜೆಯು ಮಲೆನಾಡಿನ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]