ಹೊಸನಗರ: “ಮಾನವನ ಬದುಕಿಗೆ ಕೃಷಿಯೇ ಆಧಾರವಾಗಿದ್ದು, ಆ ಕೃಷಿ ಪರಂಪರೆಯಲ್ಲಿ ಗೋವಿನ ಪಾತ್ರ ಅನನ್ಯ. ಪುರಾತನ ಕಾಲದಿಂದಲೂ ಹಾಲು, ಗೋಮೂತ್ರ ಹಾಗೂ ಸಗಣಿಯ ಮೂಲಕ ಮಾನವನ ಆರೋಗ್ಯ ಮತ್ತು ಕೃಷಿ ಸಮೃದ್ಧಿಗೆ ನೆರವಾಗುತ್ತಿರುವ ಗೋವುಗಳು ನಿಜಕ್ಕೂ ಕಾಮಧೇನು ಸಮಾನ. ಆದ್ದರಿಂದ ಬಲಿಪಾಡ್ಯಮಿಯ ದಿನದಂದು ಗೋಪೂಜೆ ಆಚರಿಸುವುದು ಅತ್ಯಂತ ಅರ್ಥಪೂರ್ಣ,” ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.

ಕ್ಷೇತ್ರದ ‘ಶ್ರೀ ಪದ್ಮಾಂಬಾ’ ಗೋಶಾಲೆಯಲ್ಲಿ ಹಸುಗಳಿಗೆ ಗಂಧ-ತಿಲಕವನ್ನಿಟ್ಟು ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, “ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಿ ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಬದುಕುವ ಸಮಾನ ಹಕ್ಕನ್ನು ಹೊಂದಿದ್ದು, ಸಮಾಜವು ಪ್ರಾಣಿ ಸಂಕುಲದ ಪಾಲನೆ-ಪೋಷಣೆಯನ್ನು ಕರ್ತವ್ಯವೆಂದು ಭಾವಿಸಬೇಕು,” ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಗೋವು ಹಾಗೂ ಅಶ್ವಗಳಿಗೆ ನೈವೇದ್ಯ ಅರ್ಪಿಸಿದರು.
ದೀಪಾವಳಿ ಪರ್ವದ ಅಂಗವಾಗಿ ಕ್ಷೇತ್ರದ ಮೂಲನಾಯಕರಾದ ಶ್ರೀ ಪಾರ್ಶ್ವನಾಥ ತೀರ್ಥಂಕರರು ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಜೈನ ವಿಧಿವಿಧಾನಗಳೊಂದಿಗೆ ಮಹಾಪೂಜೆ ನಡೆಯಿತು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು, ಹಸುಗಳಿಗೆ ಬೆಲ್ಲ ಮತ್ತು ಸಿಹಿತಿನಿಸುಗಳನ್ನು ತಿನ್ನಿಸಿ ಪುನೀತರಾದರು.

