ಶಿವಮೊಗ್ಗ ; ನಮ್ಮೂರಿನಲ್ಲಿ ಮದ್ಯ ಮಾರಾಟ ಮಾಡಬಾರದು, ಅಕ್ರಮ ಮದ್ಯವನ್ನು ದಿನಸಿ ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಬೆಳ್ಳೂರಿನಲ್ಲಿ ನಾವು ಖಾಯಂ ನಿವಾಸಿಗಳಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿರುತ್ತೇವೆ. ನಮ್ಮ ಗ್ರಾಮದಲ್ಲಿ ದಿನಸಿ ಅಂಗಡಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಮಹಿಳೆಯರಿಗೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಮದ್ಯವನ್ನು ಸೇವಿಸಿ ಸಾಕಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಮದ್ಯ ಸೇವಿಸಿದ ವ್ಯಕ್ತಿಗಳು ಬಾಯಿಗೆ ಬಂದಂತೆ ಆಶ್ಲೀಲವಾಗಿ ಮಾತನಾಡುತ್ತಾ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುತ್ತಿರುತ್ತಾರೆ. ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿರುತ್ತದೆ ಎಂದು ತಿಳಿಸಿದರು.

ಆದ್ದರಿಂದ ತಕ್ಷಣವೇ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಗ್ರಾಮದ ಸ್ವಾಸ್ಥ್ಯ ಕಾಪಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಗೆ ಶ್ರೀ ಕ್ಷೇತ್ರ ಗುಳುಗುಳಿ ಶಂಕರೇಶ್ವರ ಸೇವಾ ಸವಿತಿ ತನ್ನ ಬೆಂಬಲ ನೀಡಿದೆ.

ಪ್ರತಿಭಟನೆಯಲ್ಲಿ ಪವಿತ್ರ, ದೇವೇಂದ್ರಪ್ಪ, ನಾಗರಾಜ, ಬಾಬಣ್ಣ, ದಿವಾಕರ, ಚಂದ್ರಪ್ಪ, ಶೇಖರಪ್ಪ, ಶರತ್, ಹರೀಶ್, ರಾಜೇಶ, ಶಿವಪ್ಪ, ರಾಘು, ಕೃಷ್ಣಮೂರ್ತಿ, ಮೋಹನ, ಅರಸಾಳು ಗ್ರಾಮಸ್ಥರು ಇದ್ದರು.