ಹೊಸನಗರ

ಸಂಪಳ್ಳಿ ಕರಡಿಗ ಗವಟೂರು ಸಂಪರ್ಕ ರಸ್ತೆ ದುಸ್ಥಿತಿ : ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

InShot 20260812 164638272

ರಿಪ್ಪನ್‌ಪೇಟೆ : ರಸ್ತೆ ದುರಸ್ಥಿಗೆ ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಳ್ಳಿ, ಕರಡಿಗ, ಬೆಳಕೋಡು ಹಾಗೂ ಕೊಳವಳ್ಳಿ, ಯಡೆಗುಡ್ಡೆ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವುದರೊಂದಿಗೆ ರೋಗಿಯನ್ನು ಜೋಲಿಯಲ್ಲಿ ಹೊತ್ತು ತರುವ ಅಣಕು ಪ್ರದರ್ಶನ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

WhatsApp Group Join Now
Telegram Group Join Now
Instagram Group Join Now

ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಮಳೆಗಾಲದಲ್ಲಿ ಮೂರು ನಾಲ್ಕು ಕಿ.ಮೀ. ದೂರ ಸಂಪೂರ್ಣ ಕೆಸರುಗದ್ದೆಯಂತಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ ಜನಪ್ರತಿನಿಧಿಗಳ ಮತ್ತು ಆಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆ ತರಲು ಯಾವುದೇ ವಾಹನಗಳು ಈ ಕೆಸರು ರಸ್ತೆಯಲ್ಲಿ ಬಾರದ ಕಾರಣ ರೈತರು ಕಂಬಳಿ ಜೋಲಿ (ಡೋಲಿ) ಹೊತ್ತು ಕರೆ ತರಬೇಕಾಗಿದೆ ಎಂಬ ಅಣಕು ಪ್ರದರ್ಶನದೊಂದಿಗೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಸಮಸ್ಯೆಗೆ ಕೊನೆಯೇ ಇಲ್ಲ :

ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ರಸ್ತೆಯನ್ನು ಹಲವು ವರ್ಷಗಳಿಂದ ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರಿಗೂ ಮನವಿ ಸಲ್ಲಿಸಿ ರಸ್ತೆ ಪರಿಶೀಲನೆಗೆ ಕರೆದುಕೊಂಡು ಬಂದಿದ್ದರೂ ಪ್ರತಿ ಬಾರಿ ಅನುದಾನ ಬರಲಿ ರಸ್ತೆ ಮಾಡೋಣ ಎಂಬ ಹಾರಿಕೆ ಉತ್ತರವೇ ಸಿಗುತ್ತಿದೆ ಎಂದು ಗ್ರಾಮಸ್ಥರು ಶಾಸಕ ಆರಗ ಜ್ಞಾನೇಂದ್ರ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಗ್ರಾಮಸ್ಥರೊಬ್ಬರು ನಮಗೆ ವಿಷ ಕೊಟ್ಟುಬಿಡಿ ನಾವು ನಿಮಗೆ ಹೇಳೋದು-ಕೇಳೊದು ಎಲ್ಲ ಮುಗಿಯಲಿ ಎಂದು ಅಸಮಧಾನ ಹೊರಹಾಕಿದರು.

ರಸ್ತೆ ದುರಸ್ಥಿಯಾಗದೆ ಇದೇ ಪರಿಸ್ಥಿತಿ ಮುಂದುವರಿದರೆ ಜನರ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿ, ಇಷ್ಟೇ ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟವನ್ನು ಬಿಂಬಿಸಲು ರೋಗಿಯನ್ನು ಮರದ ಕಂಬದಲ್ಲಿ ಹೊತ್ತೊಯ್ಯುವ ಅಣಕು ಪ್ರದರ್ಶನ ಮಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಗರ್ಭಿಣಿಯರು, ಶಾಲಾ-ಕಾಲೇಜ್ ಮಕ್ಕಳು ರೋಗಿಗಳಿಗೂ ಸಂಕಷ್ಟ :

ಯಾವುದೇ ಗ್ರಾಮ ಅಭಿವೃದ್ದಿಯಾಗಬೇಕಾದರೆ ಮೊದಲು ಆ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಇರಬೇಕು. ಆದರೆ ನಮ್ಮ ಗ್ರಾಮಗಳ ಪರಿಸ್ಥಿತಿ ಹಾಗಿಲ್ಲ. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುಲು, ಮಕ್ಕಳು ಶಾಲೆ-ಕಾಲೇಜ್‌ಗೆ ತೆರಳಲು ಹಾಗೂ ಸಾರ್ವಜನಿಕರು ಸಂಚರಿಸಲು ಕೂಡಾ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಮಸಧಾನವನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.

ರಸ್ತೆ ದುರಸ್ಥಿ ಮಾಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣವೆಂದು ಆರೋಪಿಸಿದ ಗ್ರಾಮಸ್ಥರು ಈ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಪಕ್ಷಾತೀತವಾಗಿ ಸಂಘಟನೆಯೊಂದಿಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಿವಪ್ಪ ಸಂಪಳ್ಳಿ, ಶೇಖರಪ್ಪ ಕಣಬಂದೂರು, ಜಯಪ್ರಕಾಶ್, ಗಣೇಶ, ರಾಮು ಕರಡಿಗ, ಗಣೇಶ ಸಂಪಳ್ಳಿ, ಜಯಪ್ರಕಾಶ ಸಂಪಳ್ಳಿ, ಮಂಜುನಾಥ ಬೆಳಕೋಡು, ಲಕ್ಕಪ್ಪ, ಲಿಂಗಪ್ಪ, ಗಂಗಾಧರ, ನಾಗರಾಜ್, ವಾಸು, ಲೋಕಪ್ಪ, ಪಿನೀತ್, ಮಧು, ಹರೀಶ್, ಭೀಮರಾಜ್, ಯೋಗೇಂದ್ರ, ತಿಮ್ಮನಾಯ್ಕ್, ಗುಂಡಪ್ಪ, ಉಮೇಶ್, ಶ್ರೇಯಸ್, ಕರಡಿಗ, ಬೆಳಕೋಡು, ಕೊಳವಳ್ಳಿ, ಸಂಪಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!