ರಿಪ್ಪನ್‌ಪೇಟೆ : ‘ಮಾನವನಿಗೆ ದೈಹಿಕ ಆರೋಗ್ಯ ಮತ್ತು ಶಕ್ತಿ ಅತ್ಯಗತ್ಯ. ನಾವು ಸೇವಿಸುವ ಸಾತ್ವಿಕ ಆಹಾರ ಹಾಗೂ ಜೀವನದ ಸನ್ಮಾರ್ಗದ ನಡೆನುಡಿಗಳು ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಡುತ್ತವೆ’ ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಪರ್ಯೂಷಣ ಪರ್ವದ ಕೊನೆಯ ಹಾಗೂ ಹತ್ತನೇ ದಿನದ ‘ಉತ್ತಮ ಬ್ರಹ್ಮಚರ್ಯ’ ಧರ್ಮದ ಕುರಿತು ಆಶೀರ್ವಚನ ನೀಡಿದ ಶ್ರೀಗಳು, ‘ಯೋಗ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗಮುಕ್ತರಾಗಬಹುದು. ಉತ್ತಮ ಸಂಸ್ಕಾರಯುತ ಬದುಕಿಗೆ ಬ್ರಹ್ಮಚರ್ಯ ವ್ರತಪಾಲನೆಯೇ ಅತ್ಯುತ್ತಮ ಮದ್ದು’ ಎಂದು ಹೇಳಿದರು.
ಇದೇ ವೇಳೆಯಲ್ಲಿ ಶ್ರೀ ಅನಂತನಾಥ ತೀರ್ಥಂಕರರ ಅನಂತನೋಂಪಿ ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು.

ಮಠದ ಆವರಣದಲ್ಲಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಅಮ್ಮನವರಾದ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಜೈನ ಶಾಸ್ತ್ರೋಕ್ತವಾಗಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಯಿತು.
ತದನಂತರ ಶ್ರೀ ಚಂದ್ರಶಾಲೆಯಲ್ಲಿ ಪರ್ಯೂಷಣ ಪರ್ವದ ಧಾರ್ಮಿಕ ವಿಧಿವಿಧಾನಗಳು ನಡೆದವು. ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು, ಪದ್ಮಾವತಿ ಮಹಿಳಾ ಮಂಡಲದ ಸದಸ್ಯರು ಹಾಗೂ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಅನಂತನೋಂಪಿ ಪೂಜೆಯಲ್ಲಿ ಪಾಲ್ಗೊಂಡು ಜಿನಸ್ತೋತ್ರಗಳನ್ನು ಪಠಿಸಿದರು.

ಭಾಗವಹಿಸಿದ ಎಲ್ಲಾ ಶ್ರಾವಕ-ಶ್ರಾವಕಿಯರಿಗೆ ಶ್ರೀಗಳು ಮಂತ್ರಾಕ್ಷತೆ ಹಾಗೂ ಶ್ರೀಫಲ ನೀಡಿ ಆಶೀರ್ವದಿಸಿದರು.

