ರಿಪ್ಪನ್ಪೇಟೆ : ಪಟ್ಟಣದ ಸಾಗರ ರಸ್ತೆಯ ಶ್ರೀರಾಮ ಮಂದಿರದಲ್ಲಿ ಕೆರೆಹಳ್ಳಿ ಹೋಬಳಿ ವಿಶ್ವಕರ್ಮ ಸಮಾಜದ ವತಿಯಿಂದ ಭಕ್ತಿ-ಭಾವಪೂರ್ಣವಾಗಿ ವಿಶ್ವಕರ್ಮ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಭದ್ರಾವತಿಯ ಸರ್ ಎಂವಿ ಸರ್ಕಾರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ಆಚಾರ್ ಮಾತನಾಡಿ, ವಿಶ್ವಕರ್ಮನು ನಮ್ಮ ಪುರಾಣಗಳಲ್ಲಿ ವಿಶ್ವದ ಮೊದಲ ಇಂಜಿನಿಯರ್, ವಾಸ್ತುಶಿಲ್ಪಿ, ಕಲಾವಿದ ಮತ್ತು ಶಿಲ್ಪಿ. ಅಯೋಧ್ಯೆಯ ರಾಮಮಂದಿರ, ಇಂದ್ರನ ಸ್ವರ್ಗ, ಪಾಂಡವರ ಇಂದ್ರಪ್ರಸ್ಥ ದೇವಾಲಯಗಳಿಂದ ಹಿಡಿದು ದೇವಲೋಕದ ವಾಸ್ತುಶಿಲ್ಪದವರೆಗೂ ಎಲ್ಲವೂ ವಿಶ್ವಕರ್ಮನ ಸೃಷ್ಟಿಯ ಫಲವೆಂದು ಶಾಸ್ತ್ರಗಳು ಹೇಳುತ್ತವೆ.
ಇಂದಿನ ಯುಗದಲ್ಲಿ ಕಾರ್ಖಾನೆಗಳು, ಕಾರ್ಮಿಕರು, ಇಂಜಿನಿಯರುಗಳು, ತಂತ್ರಜ್ಞರು ವಿಶ್ವಕರ್ಮನ ಮಕ್ಕಳು. ಅವರು ಸಮಾಜಕ್ಕೆ ನೀಡುವ ಕೊಡುಗೆ ಅಪಾರ. ಆದ್ದರಿಂದ ವಿಶ್ವಕರ್ಮ ಜಯಂತಿ ಹಬ್ಬವು ಒಬ್ಬ ದೇವರನ್ನು ಪೂಜಿಸುವ ದಿನವಲ್ಲ ಅದು ಶ್ರಮ, ಕೌಶಲ್ಯ ಮತ್ತು ಸಾಧನೆಗೆ ಸಲ್ಲಿಸುವ ಗೌರವದ ದಿನ. ಈ ಹಬ್ಬವನ್ನು ನಾವು ಕೇವಲ ಆಚರಿಸದೆ, ಅದರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದರ ನಿಜವಾದ ಅರ್ಥಪೂರ್ಣತೆ ಬೆಳಗುತ್ತದೆ ಎಂದು ತಿಳಿಸಿದರು.
ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ ಮಾತನಾಡಿ, ವಿಶ್ವಕರ್ಮ ಸಮಾಜದ ಏಕತೆ, ಸಹಕಾರ ಮತ್ತು ಒಗ್ಗಟ್ಟಿನಿಂದಲೇ ನಮ್ಮ ಸಮಾಜದ ಬಲವರ್ಧನೆ ಸಾಧ್ಯ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜವನ್ನು ಒಟ್ಟುಗೂಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಪುಟ್ಟಚಾರ್ ಎನ್. ಜಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಡಗಿ ಮತ್ತು ಕಮ್ಮಾರರ ಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಆರ್.ಆರ್. ಕೃಷ್ಣಮೂರ್ತಿ, ಆರ್.ಎ. ಮಂಜುನಾಥ ಆಚಾರ್, ಉದಯ ಆಚಾರ್, ವಿಶ್ವನಾಥ್ ಆಚಾರ್, ಮಂಜುನಾಥ ಆಚಾರ್, ಗೃಹರಕ್ಷಕ ದಳದ ಶಶಿಧರ ಆಚಾರ್ಯ ಉಪಸ್ಥಿತರಿದ್ದರು.

ವಿಶ್ವಕರ್ಮ ಸಮಾಜದ ಹಿರಿಯರಾದ ಟೈಲರ್ ನರಸಿಂಹಾಚಾರ್, ಗ್ರಾಮ ಮೊಕ್ತೆಸರರಾದ ಶ್ರೀಧರಾಚಾರ್ ಹಾಗೂ ರಿಪ್ಪನ್ಪೇಟೆ ಮತ್ತು ಸುತ್ತಮುತ್ತಲಿನ ವಿಶ್ವಕರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿ ಉತ್ಸವಕ್ಕೆ ಶೋಭೆ ತಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ದೇವರಿಗೆ ವಿಶೇಷ ಪೂಜೆ, ಹೋಮ-ಹವನ ಹಾಗೂ ಯಂತ್ರೋಪಕರಣಗಳಿಗೆ ಪೂಜೆ ನೆರವೇರಿಸಲಾಯಿತು. ಸಮೂಹ ಭೋಜನ ವ್ಯವಸ್ಥೆಯೂ ಜರುಗಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿಶ್ವಕರ್ಮ ಸಮಾಜದ ಹಿರಿಯರು, ಯುವಕರು ಹಾಗೂ ಮಹಿಳಾ ವೃಂದ ಸಕ್ರಿಯ ಪಾತ್ರವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.