ರಿಪ್ಪನ್ಪೇಟೆ : ರಕ್ತದಾನವು ಕೇವಲ ಸೇವೆಯಲ್ಲ, ಅದು ಜೀವದಾನ. ನಮ್ಮ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಮಾಡಿದ್ದರಂತೆ, ಇಂದಿನ ದಿನದಲ್ಲಿ ನಾವು ಮಾಡಬಹುದಾದ ಮಹಾನ್ ತ್ಯಾಗವೆಂದರೆ ಜೀವ ಉಳಿಸುವ ಈ ರಕ್ತದಾನ. ಪ್ರತಿಯೊಬ್ಬರೂ ಆರೋಗ್ಯವಾಗಿರುವಾಗ ರಕ್ತದಾನ ಮಾಡುವುದು ನಮ್ಮ ಸಾಮಾಜಿಕ ಹಾಗೂ ದೇಶಭಕ್ತಿಯ ಹೊಣೆಗಾರಿಕೆ ಎಂದು ರೋಟರಿ ಕ್ಲಬ್ ರಿಪ್ಪನ್ಪೇಟೆಯ ಅಧ್ಯಕ್ಷ ಎ.ಎಂ. ಕೃಷ್ಣರಾಜ ಹೇಳಿದರು.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿ, ಇಂದು ಇಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ದಾತರು ಅನಾಮಿಕವಾಗಿ ಯಾರೋ ಒಬ್ಬರ ಜೀವ ಉಳಿಸಲು ಕಾರಣರಾಗುತ್ತಿದ್ದಾರೆ. ಇದು ಮಾನವೀಯತೆಯ ಶ್ರೇಷ್ಠ ಉದಾಹರಣೆ. ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕೇವಲ ಧ್ವಜಾರೋಹಣದ ಮೂಲಕ ಮಾತ್ರವಲ್ಲ, ಜೀವ ಉಳಿಸುವ ಕಾರ್ಯದ ಮೂಲಕ ಆಚರಿಸುವುದು ನಿಜವಾದ ದೇಶ ಸೇವೆ ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಎಂ. ಬಿ. ಲಕ್ಷ್ಮಣಗೌಡ, ರಿಪ್ಪನ್ಪೇಟೆ ರೋಟರಿ ಕ್ಲಬ್ ಕಾರ್ಯದರ್ಶಿ ರವೀಂದ್ರ ಬಲ್ಲಾಳ್, ಹಿರಿಯ ಪತ್ರಕರ್ತರಾದ ಕೆ.ಎಂ. ಬಸವರಾಜ್, ರಿ.ರಾ.ರವಿಶಂಕರ್, ಮಾಜಿ ಅಧ್ಯಕ್ಷ ಎಂ.ಬಿ. ಮಂಜುನಾಥ್, ರಾಧಾಕೃಷ್ಣ ಎಚ್.ಎ., ದೇವದಾಸ ಆಚಾರ್ಯ, ಸೀನಿಯರ್ ಚೇಂಬರ್ ಪದಾಧಿಕಾರಿ ಅಭಿಬ್, ರೋಟರಿ ಕ್ಲಬ್ನ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ನೌಕರರಾದ ಗಣೇಶ್ ಆರ್. ಮತ್ತು ದೀಪ ಗಣೇಶ್ ಶಿಬಿರವನ್ನು ಆಯೋಜಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.