ಅರಿವಿನ ಕಣ್ಣು ತೆರೆಸಲು ಗುರು ಬೇಕು ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ಸೊರಬ ; ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ನೆಮ್ಮದಿಯಿಲ್ಲ. ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಆಧ್ಯಾತ್ಮಗಳ ಕೊಡುಗೆ ಅಪಾರ. ಅರಿವಿನ ಕಣ್ಣು ತೆರೆಸಲು ಗುರು ಮತ್ತು ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಗುರುವಾರ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ 23ನೇ ವರುಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ನಂಬಿಕೆ ವಿಶ್ವಾಸಗಳು ಕಳೆದು ಹೋದರೆ ಬಾಳುವುದು ಬಲು ಕಷ್ಟ. ಸುಖ ಸಮೃದ್ಧಿ ಬೆಳೆದಂತೆ ಸಂಸ್ಕೃತಿ ಸತ್ಕೃತಿ ಬೆಳೆಯುತ್ತಿಲ್ಲ. ವಿದ್ಯಾ ಬುದ್ಧಿ ಬೆಳೆದ ಪ್ರಮಾಣದಲ್ಲಿ ಹೃದಯ ಪರಿವರ್ತನೆಯಾಗದಿರುವುದೇ ಇಂದಿನ ಗೊಂದಲಗಳಿಗೆ ಕಾರಣ. ಅಶಾಂತಿ ಅಜ್ಞಾನದ ತಾಕಲಾಟದಲ್ಲಿ ಸಮಾಜ ಬಡವಾಗಬಾರದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ನಾಗರಿಕತೆಯ ನೆಪದಲ್ಲಿ ನಿಜವಾದ ಮೌಲ್ಯಗಳು ಕಣ್ಮರೆಯಾಗಬಾರದು. ಮನುಷ್ಯನಲ್ಲಿ ದೈವೀ ಗುಣಗಳು ಬೆಳೆದು ಬಂದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಇತಿಹಾಸ ಪರಂಪರೆವುಳ್ಳ ಶಾಂತಪುರ ಸಂಸ್ಥಾನ ಹಿರೇಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಮಲೆನಾಡಿನ ಪ್ರಾಂತದಲ್ಲಿ ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಧರ್ಮದ ಅರಿವು ಮೂಡಿಸುವ ಕೆಲಸವನ್ನು ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನಿರಂತರ ಮಾಡುತ್ತಾ ಬಂದಿದ್ದಾರೆ. ಪ್ರತಿ ವರುಷ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಸಂಯುಕ್ತಗೊಳಿಸಿ ಭಕ್ತರ ಬಾಳಿಗೆ ಬೆಳಕು ತೋರುವ ಕಾರ್ಯ ಮಾಡುತ್ತಿರುವುದು ತಮಗೆ ಅತಿ ಸಂತೋಷವನ್ನು ಉಂಟು ಮಾಡಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.

ನೇತೃತ್ವ ವಹಿಸಿದ ಶಾಂತಪುರ ಸಂಸ್ಥಾನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಒಳ್ಳೆಯವನಾಗಲು ಕೆಟ್ಟವನಾಗಲು ಅವನ ನಡವಳಿಕೆಯೇ ಮೂಲ ಕಾರಣ. ಮನುಷ್ಯ ಮನುಷ್ಯರ ಮಧ್ಯ ಬೆಳೆದು ಬಂದ ಕಂದಕಗಳನ್ನು ಮುಚ್ಚಿ ಸಾಮರಸ್ಯ ಸೌಹಾರ್ದತೆ ಬೆಳೆಸುವುದೇ ಧರ್ಮದ ಗುರಿ. ಶ್ರೀ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದದಿಂದ ಪ್ರತಿ ವರುಷ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತಿರುವುದು ಸಂತೋಷದ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ ಬಂಕಾಪುರ ಅರಳೆಲೆಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾಗಿರುವ ಗಟ್ಟಿತನ ಬೇಕು. ಮನಸ್ಸು ಮಾತು ಕೃತಿ ಒಂದಾಗಿ ನಡೆಯುವವನ ಜೀವನ ಉಜ್ವಲಗೊಳ್ಳುತ್ತದೆ. ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿಯಿಲ್ಲ. ಉರಿಯುವ ದೀಪ ಮತ್ತೊಂದು ದೀಪ ಬೆಳಗಿಸುತ್ತದೆ. ಆದರೆ ಉರಿಯದಿರುವ ಹಣತೆ ಮತ್ತೊಂದು ದೀಪ ಬೆಳಗಲು ಸಾಧ್ಯವಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯದ ದಶಧರ್ಮ ಸೂತ್ರಗಳ ಪರಿಪಾಲನೆಯಿಂದ ಬದುಕು ವಿಕಾಸಗೊಳ್ಳುತ್ತದೆ. ಶಾಂತಪುರ ಮಠದ ಶ್ರೀಗಳವರ ಶ್ರಮ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದರು.

ಸೊರಬ ವೀರಶೈವ ಸಮಾಜದ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಹಾಗೂ ಕುಬಟೂರ ಗಿರೀಶ್ ಅವರು ಧರ್ಮ ಸಮಾರಂಭವನ್ನು ಸಂಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ಈ ಧರ್ಮ ಸಮಾರಂಭದಲ್ಲಿ ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶ್ರೀಗಳು, ಜಡೆ ಡಾ|| ಮಹಾಂತ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕುರವತ್ತಿ ನಂದೀಶ್ವರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು ಶ್ರೀಗಳು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ್ರು ಬಿಳಗಲಿ, ಅ.ಭಾ.ವೀ. ಮಹಾಸಭಾ ಜಡೆ ಹೋಬಳಿ ಘಟಕದ ಅಧ್ಯಕ್ಷ ಕೆ.ಬಂಗಾರಪ್ಪಗೌಡ್ರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಕಾಳಂಗಿ ಭಜನಾ ಮಂಡಳಿ ಅಗಸನಹಳ್ಳಿ ಕಲ್ಲೇಶ್ವರ ಭಜನಾ ಸಂಘದವರಿಂದ ಭಕ್ತಿ ಗೀತೆ ಜರುಗಿದವು. ಬಂಕವಳ್ಳಿ ಬಿ.ವೀರೇಂದ್ರಗೌಡ ನಿರೂಪಿಸಿದರು. ಪ್ರಸಾದ ಸೇವೆಯನ್ನು ಕುಬಟೂರು ಗಿರೀಶ ಸಹೋದರರು ಹಾಗೂ ಶಾಲು ಹೂವಿನ ಸೇವೆಯನ್ನು ಶಿರಸಿ ಬಸವರಾಜಗೌಡ್ರು ಸಲ್ಲಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

Leave a Comment