ರಿಪ್ಪನ್‌ಪೇಟೆ ; ರಿಪ್ಪನ್‌ಪೇಟೆಯಲ್ಲಿ ಸೋಮವಾರ ನಡೆದ ವಾರದ ಸಂತೆಯಲ್ಲಿ ಗಗನಕ್ಕೇರಿದ ತರಕಾರಿ, ಹಣ್ಣು-ಹಂಪಲು ಮತ್ತು ದಿನಸಿ ಸಾಮಗ್ರಿಗಳ ಬೆಲೆಯ ನಡುವೆಯೂ ದೀಪಾವಳಿ ಹಿನ್ನೆಲೆಯಲ್ಲಿ ರಂಗು ರಂಗಿನ ಬೂರೆಮಗೆಯ ವ್ಯಾಪಾರ ಬಲು ಜೋರಾಗಿತ್ತು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/17SkHfHXYE/
ಉರಿ ಬಿಸಿಲ ನಡುವೆ ಬೆಳಗ್ಗೆಯಿಂದ ಮಂದಗತಿಯಲ್ಲಿ ಸಾಗಿದ ವ್ಯಾಪಾರ ಸಂಜೆಯಾಗುತ್ತಿದ್ದಂತೆ ಚುರುಕುಗೊಂಡಿತು.
ಹಬ್ಬದ ಅಂಗವಾಗಿ ಕೃಷಿ ಕಾರ್ಮಿಕರು, ರೈತಾಪಿ ವರ್ಗದವರಿಂದ ಜಾನುವಾರುಗಳ ಕೊರಳಿಗೆ ಗಂಟೆ, ಕಣ್ಣಿ ಮತ್ತು ಹಗ್ಗ ಸೇರಿದಂತೆ ಬೂರೆ ಮಗೆ, ಮಣ್ಣಿನ ಹಣತೆ, ತರಕಾರಿ ಸಿಹಿಕುಂಬಳ, ಸೊಪ್ಪಿನ ವ್ಯಾಪಾರದ ಕಿಮ್ಮತ್ತು ಜೋರಾಗಿಯೇ ನಡೆಯಿತು.
ಹಬ್ಬದ ಅಂಗವಾಗಿ ಗ್ರಾಮ ದೇವತೆಗಳಿಗೆ ನೋನಿ ಆಚರಣೆ ಪ್ರಯುಕ್ತ ಹಿನ್ನೆಲೆಯಲ್ಲಿ ಕೋಳಿ, ಕುರಿ ಮತ್ತು ಬಿದರಿನ ಬುಟ್ಟಿ, ತೆಂಗಿನಕಾಯಿಗಳ ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು.

ದೀಪಾವಳಿ ನೋನಿ ;
ಮಲೆನಾಡಿನ ವಿಶೇಷ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬಕ್ಕೆ ಜನ ಅಗತ್ಯ ವಸ್ತುಗಳ ಖರೀದಿಯೊಂದಿಗೆ ಹಬ್ಬಕ್ಕೆ ಊರಿನ ಗ್ರಾಮದ ಮನೆ ದೈವಗಳಿಗೆ ಹರಕೆ ಸಲ್ಲಿಸಿ ಪ್ರಸಕ್ತ ವರ್ಷದಲ್ಲಿ ಬೆಳೆದಿರುವ ಬೆಳೆ ಬೇಸಾಯಗಳಿಗೆ ಮಕ್ಕಳು ಮರಿಗಳಿಗೆ ಜಾನುವಾರುಗಳಿಗೆ ಯಾವುದೇ ರೋಗ ರುಜಿನೆ ಹರಡದಂತೆ ಪ್ರಾರ್ಥಿಸಿ ದೇವರು ದೈವಗಳಲ್ಲಿ ಮೊರೆಹೋಗಿ ಭಕ್ತಿಯಿಂದ ಪ್ರಾರ್ಥಿಸಿ ಹರಕೆ ಒಪ್ಪಿಸುವುದು ಪೂರ್ವಜರ ಕಾಲದಿಂದಲೂ ಗ್ರಾಮದಲ್ಲಿ ವರಾಡ ಎತ್ತಿ ಆಚರಿಸಿಕೊಂಡು ಬಂದ ಸಂಪ್ರದಾಯದ ಪದ್ಧತಿಯೇ ನೋನಿ ಹಬ್ಬ.
ಮುಂಬರುವ ಭಾನುವಾರ ಈ ಹಬ್ಬ ಆಚರಿಸಲಾಗುತ್ತದೆ.
ಗ್ರಾಮಗಳ ದೇವರುಗಳಿಗೆ ನೋನಿ ಸಂದರ್ಭದಲ್ಲಿ ದೇವರ ಬನವನ್ನು ಊರಿನವರೆಲ್ಲ ಜಾತಿ, ಭೇದ ಭಾವನೆ ಇಲ್ಲದೆ ಎಲ್ಲರೂ ಮನೆಗೆ ಒಬ್ಬರು ಇಬ್ಬರಂತೆ ತೆರಳಿ ಸ್ವಚ್ಚಗೊಳಿಸಿ ತಳಿರು ತೋರಣಗಳೊಂದಿಗೆ ಬಾಳೆ, ಕಬ್ಬಿನ ಸುಳಿಯನ್ನು ಕಟ್ಟಿ ಚೆಂಡುಹೂವಿನ ಮಾಲೆಯೊಂದಿಗೆ ಅಲಂಕರಿಸಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ಸಮರ್ಪಿಸಿ ಕೋಳಿ, ಕುರಿಗಳನ್ನು ಬಲಿ ನೀಡುವುದು ಹಬ್ಬದ ಪದ್ದತಿಯಾಗಿದೆ.

ಭರದ ಸಿದ್ದತೆ ;
ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಇನ್ನೊಂದು ವಾರ ಬಾಕಿ ಇದೆ. ಈಗಾಗಲೇ ಮಲೆನಾಡಿನಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿದೆ. ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.