ತೀರ್ಥಹಳ್ಳಿ ; ಕೆಎಫ್‌ಡಿ ಸೋಂಕಿನಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ 55 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದು ಈ ವರ್ಷದ ಮೊದಲ ಬಲಿಯಾಗಿದೆ.
ಕೊನೇರಿಪುರದ 55 ವರ್ಷದ ಮಹಿಳೆಗೆ ಜ.23ರಂದು ಕೆಎಫ್‌ಡಿ ಪಾಸಿಟಿವ್ ಬಂದಿತ್ತು. ನಂತರ ಅವರಿಗೆ ಶಿವಮಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ಗುಣಮುಖರಾಗಿದ್ದ ಅವರು ಜ.29ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮತ್ತೆ ರೋಗದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಫೆ.5ರಂದು ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆ.14ರಂದು ಮೃತಪಟ್ಟಿದ್ದಾರೆ. ಮಹಿಳೆಯು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 48 ಮಂದಿಗೆ ಸೋಂಕು ;
ಈ ವರ್ಷದಲ್ಲಿ ಫೆ.24ರವರೆಗೆ 4,568 ಮಂದಿಗೆ ರಕ್ತಮಾದರಿ ಪರೀಕ್ಷೆ ಮಾಡಲಾಗಿದ್ದು 48 ಮಂದಿಗೆ ಪಾಸಿಟಿವ್ ಬಂದಿದೆ. ಒಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ 21, ಉತ್ತರಕನ್ನಡ 1, ಚಿಕ್ಕಮಗಳೂರು 26 ಮಂದಿಗೆ ಪಾಸಿಟಿವ್ ಬಂದಿದೆ. 13 ಸಕ್ರಿಯ ಪ್ರಕರಣಗಳಿವೆ.