ರಿಪ್ಪನ್‌ಪೇಟೆ: ಭಕ್ತಿ ಮತ್ತು ಶ್ರದ್ಧೆಯಿಂದ ಕೈಗೊಳ್ಳುವ ಪಾದಯಾತ್ರೆ ಧಾರ್ಮಿಕ ಚಿಂತನೆಗೆ ಪ್ರೇರಣೆ ನೀಡುವುದರ ಜತೆಗೆ ಆತ್ಮೋನ್ನತಿಗೆ ಸಹಕಾರಿಯಾಗುತ್ತದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಹೊಂಬುಜ ಜೈನ ಮಠದಲ್ಲಿ ಶುಕ್ರವಾರ ನಡೆದ ವಿಶೇಷ ಪೂಜೆ ಹಾಗೂ ಭೋಜನ ಸೇವೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಐನಾಪುರ, ಅಥಣಿ, ಶಿರಹಟ್ಟಿ ಹಾಗೂ ಶೇಡಬಾಳ ಭಾಗಗಳಿಂದ ಸುಮಾರು 150 ಮಂದಿ ಶ್ರಾವಕರು ಪಾದಯಾತ್ರೆ ಮೂಲಕ ಹೊಂಬುಜಕ್ಕೆ ಆಗಮಿಸಿದರು. ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಅಭೀಷ್ಟವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿಯ ದರ್ಶನ ಪಡೆಯಲು ಆಗಮಿಸಿದ ಭಕ್ತರನ್ನು ಶ್ರೀಮಠದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನಿತ್ಯ ದೇವರ ಸ್ತೋತ್ರ ಪಠಣ, ಸ್ವಾಧ್ಯಾಯ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿನ ಒತ್ತಡ ಮತ್ತು ಕ್ಲೇಶಗಳು ಕಡಿಮೆಯಾಗುತ್ತವೆ ಎಂದು ಹೇಳಿ, ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಜೈನ ಧರ್ಮದ ತತ್ವಗಳನ್ನು ವಿವರಿಸಿದ ಅವರು, ಸದೃಢ ಮತ್ತು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಸಂಕಲ್ಪ ಮಾಡಬೇಕು ಎಂದ ಶ್ರೀಗಳು, ಕಳೆದ 14 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ನಡೆಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜೆ ಹಾಗೂ ಭೋಜನ ಸೇವೆಯ ಕರ್ತೃಗಳಾದ ಹೊಂಬುಜ ಪಾದಯಾತ್ರೆ ಸಂಘ, ಐನಾಪುರ ಮತ್ತು ಶಿರಹಟ್ಟಿ, ಶ್ರೀಮತಿ ಪದ್ಮಶ್ರೀ ಹಾಗೂ ಶ್ರೀ ಮಹಾವೀರ ವಸಂತ ನಿಲಜಗಿ, ಮಹಾವೀರ ಉದ್ಯೋಗ ಸಂಸ್ಥೆ, ಹುಕ್ಕೇರಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಭಕ್ತ ಪರಿವಾರದವರಿಗೆ ಶ್ರೀಗಳು ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಸಿರಿಧಾನ್ಯ, ನವಧಾನ್ಯ ಹಾಗೂ ವಿವಿಧ ಸವಿ ನೈವೇದ್ಯಗಳನ್ನು ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಸಮರ್ಪಿಸಲಾಯಿತು.

