ರಿಪ್ಪನ್‌ಪೇಟೆ : ಹಿಂದೂ ಮುಸ್ಲಿಂ ಹಬ್ಬವನ್ನು ಕಾನೂನು ಚೌಕಟ್ಟಿನಡಿಯಲ್ಲಿ ಆಚರಿಸುವ ಮೂಲಕ ಧರ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡಿ ಎಂದು ತೀರ್ಥಹಳ್ಳಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಡಾ.ಭಾನುಪ್ರಕಾಶ ಕರೆ ನೀಡಿದರು.
ರಿಪ್ಪನ್‌ಪೇಟೆಯ ಜಿ.ಎಸ್.ಬಿ. ಕಲ್ಯಾಣಮಂದಿರದಲ್ಲಿ ಗಣೇಶ ಹಬ್ಬದ ಅಂಗವಾಗಿ ಆಯೋಜಿಸಲಾದ ಪೊಲೀಸ್ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಗಣೇಶ ಹಬ್ಬ ಧಾರ್ಮಿಕ ಹಬ್ಬವಾಗಿ ಉಳಿದಿಲ್ಲ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಾಲಗಂಗಾಧರನಾಥ ತಿಲಕರು ಎಲ್ಲಾ ಜನಾಂಗದವರು ಸಂಘಟಿಸುವ ಉದ್ದೇಶದಿಂದಾಗಿ ಗಣೇಶ ಹಬ್ಬವನ್ನು ಹುಟ್ಟುಹಾಕಿದರು. ಸಾಂಸ್ಕೃತಿಕವಾಗಿ ಸುಗುಮ ರೀತಿಯಲ್ಲಿ ಹಬ್ಬವನ್ನು ಆಚರಿಸುವುದಕ್ಕೆ ಮೊದಲ ಆದ್ಯತೆ. ಗಣಪತಿ ಹಬ್ಬವನ್ನು ವಿಜೃಂಭಣೆಯೊಂದಿಗೆ ಆಚರಿಸಿ ಎಂದು ಸಂಘಟಕರಿಗೆ ಕರೆ ನೀಡಿದದರು.
ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಾಗ ನಮ್ಮ ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹ ಬಾಂಧವ್ಯದೊಂದಿಗೆ ವರ್ತಿಸುವಂತೆ ಈಗಾಗಲೇ ಇಲಾಖೆಯ ಸಿಬ್ಬಂದಿವರ್ಗಕ್ಕೆ ಸೂಚನೆ ನೀಡಲಾಗಿದೆ. ನಾವು ನಿಮ್ಮ ಹಾಗೆ ಮನುಷ್ಯರೆ. ಖಾಕಿ ಹಾಕಿದವರು ಇನ್ನೂ ಹೆಚ್ಚಿನ ಮನುಷ್ಯರೇ ನಮಗೂ ಮಾನವೀಯತೆ ಇದೆ. ಕಾನೂನಿನಡಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ತಾವುಗಳು ಅಶಾಂತಿಗೆ ಕಾರಣವಾಗದೆ.ಶಾಂತಿ ಸುವವ್ಯವಸ್ಥೆಗೆ ಸಹಕರಿಸುವಂತೆ ತಿಳಿಸಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ಎಲ್ಲರೂ ಶಾಂತಿ ಸುವ್ಯವಸ್ಥೆಯನ್ನು ಗೌರವಿಸಿ ಎಂದ ಅವರು ರಿಪ್ಪನ್‌ಪೇಟೆ ಗಣೇಶೋತ್ಸವ ಬೇರೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮಾದರಿಯಾಗಲಿ ಎಂದರು.
ಸುಪ್ರೀಂಕೋರ್ಟ್ ಡಿ.ಜೆ. ಇನ್ನಿತರ ಕರ್ಕಶ ಶಬ್ದ ಮಾಡುವ ಧ್ವನಿವರ್ಧಕವನ್ನು ಅಳವಡಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುವ ಆದೇಶವಿದೆ. ಬೆಳಗ್ಗೆ 6 ರಿಂದ ರಾತ್ರಿ 10ರೊಳಗೆ ಧ್ವನಿವರ್ಧಕ ಬಳಕೆ ಮಾಡಲು ಅವಕಾಶವಿದೆ. ಆ ನಂತರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದೆಂಬ ಉದ್ದೇಶದಿಂದ ಬಳಕೆಯನ್ನು ಕಡ್ಡಾಯ ಬಂದ್ ಮಾಡಲಾಗುವುದೆಂದರು. ಅನ್ಯಧರ್ಮೀಯರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಚೋದನಾಕಾರಿ ಸಂದೇಶಗಳ ಬಗ್ಗೆ ಕಳುಹಿಸುವವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಭಾಗವಹಿಸಿ ಮಾತನಾಡಿ, ಮಲೆನಾಡಿನ ಜನರು ಶಾಂತಿ ಪ್ರೀಯರು ಹಬ್ಬ ಹರಿದಿನಗಳನ್ನು ಕಾನೂನಿನಡಿಯಲ್ಲಿ ಶಾಂತಿಯಿಂದ ಆಚರಿಸಿ ನಮ್ಮ ಇಲಾಖೆಯಿಂದ ಗಣೇಶ ಹಬ್ಬದ ಪರವಾನಿಗೆ ಪಡೆಯಲು ಸ್ಥಳೀಯವಾಗಿ ಸಿಬ್ಬಂದಿಗಳನ್ನು ನೇಮಿಸಿ ಕಛೇರಿಗೆ ಅಲೆಯದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಂತಿ ಸಮಿತಿ ಸಭೆಯಲ್ಲಿ ಹೊಸನಗರ ತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ, ವೃತ್ತ ನಿರೀಕ್ಷಕ ಗೌಡರ ಗೌಡಪ್ಪ, ಅಗ್ನಿಶಾಮಕ ದಳದ ಅಧಿಕಾರಿಗಳು ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಪಿಎಸ್‌ಐ ರಾಜುರೆಡ್ಡಿ, ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ, ಎಂ.ಸುರೇಶ್‌ಸಿಂಗ್, ಎಂ.ಬಿ.ಮಂಜುನಾಥ, ಸುಂದರೇಶ್, ಆರ್.ಎ.ಚಾಬುಸಾಬ್, ಆಸಿಫ್‌ಭಾಷಾ, ಉಬೇದುಲ್ಲಾ ಷರೀಫ್, ನಿರೂಪ್ ಕುಮಾರ್, ಟಿ.ಆರ್.ಕೃಷ್ಣಪ್ಪ, ಆರ್.ರಾಘವೇಂದ್ರ, ಹಾಗೂ ಸುತ್ತಮುತ್ತಲ ಗ್ರಾಮಗಳ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಪೊಲೀಸ್ ಕಂದಾಯ ಗ್ರಾಮ ಪಂಚಾಯಿತ್ ಅಧಿಕಾರಿಗಳು ಹಾಜರಿದ್ದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ ರಾಜುರೆಡ್ಡಿ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಗೌಡರಗೌಡಪ್ಪ ವಂದಿಸಿದರು.

