ಹೊಸನಗರ

30 ವರ್ಷಗಳ ನಿಸ್ವಾರ್ಥ ಸೇವೆಗೆ ಒಲಿದ ರಾಷ್ಟ್ರೀಯ ಗೌರವ : ಕರುನಾಡಿನ ಹೆಮ್ಮೆಯ ಶಿಕ್ಷಕಿ ರತ್ನಕುಮಾರಿ ಎಸ್.

<p>ಹೊಸನಗರ : ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶಿಕ್ಷಕರಿಗೆ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿ ‘ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ’. ಈ ವರ್ಷದ ಈ ಪ್ರಶಸ್ತಿಯನ್ನು ಪಡೆಯಲು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಶಿಕ್ಷಕಿ…</p>

InShot 20260904 095917071

ಹೊಸನಗರ : ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶಿಕ್ಷಕರಿಗೆ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿ ‘ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ’. ಈ ವರ್ಷದ ಈ ಪ್ರಶಸ್ತಿಯನ್ನು ಪಡೆಯಲು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಶಿಕ್ಷಕಿ ಎಂದರೆ ರತ್ನಕುಮಾರಿ ಎಸ್.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ಇವರಿಗೆ ಈ ಪ್ರಶಸ್ತಿ ಒಲಿದು ಬಂದಿರುವುದು ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ.

ಪ್ರತಿವರ್ಷ ಸೆಪ್ಟೆಂಬರ್ 5 ರಂದು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಪರಂಪರೆ ಬಹಳಷ್ಟು ವರ್ಷಗಳಿಂದ ನಡೆದುಬಂದಿದೆ. ಈಗಾಗಲೇ 2015-16ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ 2019-20ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದ ರತ್ನಕುಮಾರಿಯವರು ಈ ಬಾರಿ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುತ್ತಿರುವುದು ಅವರ 30 ವರ್ಷಗಳ ಸೇವಾ ಅವಧಿಯ ಸಾರ್ಥಕ ಕ್ಷಣವಾಗಿದೆ.

ಶಿಕ್ಷಕಿಯಾಗಬೇಕೆಂಬ ಕನಸನ್ನು ಹೊತ್ತು ಬಿ.ಕಾಂ ಪದವಿಯನ್ನು ಪಡೆದ ನಂತರ ಟಿಸಿಎಚ್ ಅನ್ನು ಓದಿ ದಿನಾಂಕ: 30.12.1996 ರಲ್ಲಿ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾದರು. ತಂದೆ ರಾಮಕೃಷ್ಣ ಐತಾಳ್, ತಾಯಿ ಕಮಲಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುರುವಳ್ಳಿಯಲ್ಲಿ, ಪಿಯುಸಿಯನ್ನು ತೀರ್ಥಹಳ್ಳಿಯಲ್ಲಿ ಹಾಗೂ ಪದವಿಯನ್ನು ತುಂಗಾ ಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ತಂದೆ ತಾಯಿ ಹಾಗೂ ಗುರು ಹಿರಿಯರ ಮಾರ್ಗದರ್ಶನ, ಸಂಸ್ಕಾರ, ಶಿಸ್ತಿನ ಗರಡಿಯಲ್ಲಿ ಪಳಗಿದ ರತ್ನಕುಮಾರಿಯವರು ತಾವು ಕೂಡ ಶಿಕ್ಷಕಿಯಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕೆಂಬ ಪಣತೊಟ್ಟವರು.

ತಮಗೆ ಪಾಠ ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕರೇ ಇವರು ಶಿಕ್ಷಕಿಯಾಗಿ ಇಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗಿದ್ದಾರೆ. ಓದಿನಲ್ಲಿ ಮುಂಚೂಣಿಯಲ್ಲಿದ್ದ ಇವರು ಪುಸ್ತಕ ಓದುವುದು, ಹಾಡು, ನೃತ್ಯ, ನಾಟಕಾಭಿನಯ, ಏಕಪಾತ್ರಾಭಿನಯ, ಪದಬಂಧ ತುಂಬುವ ಹವ್ಯಾಸ ಹೊಂದಿದ್ದಾರೆ. ಸದಾಕಾಲ ಶಾಲೆ ಹಾಗೂ ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತ ಆ ದೆಸೆಯಲ್ಲಿ ಕಾರ್ಯ ಪ್ರವೃತ್ತರಾಗಿರುತ್ತಾರೆ.

ಅದಕ್ಕಾಗಿ ಹಗಲಿರುಳು ರಜೆಯನ್ನು ಲೆಕ್ಕಿಸದೆ ಸಹಶಿಕ್ಷಕರ, ಪೋಷಕರ, ಗ್ರಾಮಸ್ಥರ ಹಾಗೂ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರ ಸಂಪೂರ್ಣ ಸಹಾಯ, ಸಹಕಾರವನ್ನು ಪಡೆದು ಮಕ್ಕಳ ಕಲಿಕೆಗಾಗಿ ಒಂದಿಲ್ಲೊಂದು ಹೊಸ ಹೊಸ ತಂತ್ರ ವಿಧಾನಗಳನ್ನು ಅಳವಡಿಸಿ ಬೋಧನೆಗೆ ಹೆಚ್ಚಿನ ಸಮಯ ವಿನಿಯೋಗಿಸುತ್ತಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹಳ್ಳಿಗಾಡಿನಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಯಪಡಿಸಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಗುರಿಯನ್ನು ಹೊಂದಿರುವ ಶಿಕ್ಷಕಿ. ಮಕ್ಕಳ ಭೌದ್ಧಿಕ ಸಾಮರ್ಥ್ಯವನ್ನು ಅರಿತು, ಅವರ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ, ಅಗತ್ಯ ಪಾಠೋಪಕರಣಗಳನ್ನು ತಯಾರಿಸಿ ಕಲಿಸುವುದು ಇವರ ವಿಶೇಷತೆ.

ಒಂದು ದಿನವೂ ಸಮಯವನ್ನು ವ್ಯರ್ಥವಾಗಿ ವ್ಯಯ ಮಾಡದೆ ಸದಾ ಮಕ್ಕಳೊಂದಿಗೆ ಬೆರೆತು ವಿನೂತನ ಯೋಜನೆಗಳ ಮೂಲಕ ಇಲಾಖೆಯ ಆದೇಶಗಳು ನಿಯಮಗಳನ್ನು ಪಾಲಿಸುತ್ತಲೇ ಮಕ್ಕಳೊಂದಿಗೆ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುತ್ತಾರೆ. ಎಷ್ಟೋ ಶನಿವಾರ, ಭಾನುವಾರ ಹಾಗೂ ರಜಾ ದಿನಗಳನ್ನು ಇವರು ಶಾಲೆಯಲ್ಲಿಯೇ ಕಳೆದಂತಹ ಉದಾಹರಣೆಗಳು ಇವೆ.

ಇಡೀ ಶಾಲೆಯ ವಾತಾವರಣವನ್ನೇ ಕಲಿಕಾ ಸ್ನೇಹಿಯನ್ನಾಗಿಸಿ ಮಕ್ಕಳು ಪ್ರತಿದಿನ ಸಂತಸದಿಂದ ಶಾಲೆಗೆ ಬರಬೇಕು ಖುಷಿಯಾಗಿ ಓದು ಬರಹ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ನಲಿಯುತ್ತಾ ಕಲಿಯಬೇಕು. ಕಲಿತದ್ದು ಚಿರಕಾಲ ಸ್ಮೃತಿ ಪಟ್ಟಣದಲ್ಲಿ ಉಳಿಯಬೇಕು. ಈ ಪರಿಕಲ್ಪನೆಯಲ್ಲಿ ಇಡೀ ಶಾಲಾ ವಾತಾವರಣವನ್ನೇ ಮಕ್ಕಳ ಕಲಿಕಾ ದೃಷ್ಟಿಯಿಂದ ನಿರ್ಮಿಸಲಾಗಿದೆ.

ಪಾಠದ ಜೊತೆಗೆ ಆಟ, ಸಾಮಾನ್ಯ ಜ್ಞಾನ, ಹಾಡು, ನೃತ್ಯ, ನಾಟಕ ಇನ್ನಿತರ ಪುಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಈ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಉತ್ತಮ ಬರವಣಿಗೆ, ಓದುವ ಅಭ್ಯಾಸವನ್ನು ಸಹ ಹೊಂದಿದ್ದಾರೆ. ಸ್ವಚ್ಛ ಸುಂದರ ಪರಿಸರದ ಮಧ್ಯೆ ಮಕ್ಕಳು ಕೃತಕವಲ್ಲದ ವಾತಾವರಣದಲ್ಲಿ ಸಂತಸದಾಯಕ ಕಲಿಕೆಯಲ್ಲಿ ತೊಡಗುವಂತೆ ಔಷಧವನ, ವಿಜ್ಞಾನವನ, ಮಕ್ಕಳ ಸಾಹಸ ಕ್ರೀಡೆಗಳಿಗೆ ಅನುಕೂಲಿಸುವ ವಿಶೇಷ ಚಟುವಟಿಕೆಗಳಿಗಾಗಿ ಅನುಪಯುಕ್ತ ವಸ್ತುಗಳಿಂದ ತಯಾರಿಸಲಾದ ಸಲಕರಣೆಗಳು, ಕಲಿಕಾ ಕುಟೀರ, ತೆರೆದ ರಂಗಮಂದಿರ, ಗಿಡ ಮರಗಳಿಂದ ಕೂಡಿದ ಪರಿಸರ, ಶಾಲೆಯ ತುಂಬಾ ಕಲಿಕೆಗೆ ಪೂರಕವಾದ ಬರವಣಿಗೆ ಇವೆಲ್ಲವೂ ಮಕ್ಕಳ ಕಲಿಕೆಗೆ ಪುಷ್ಟಿ ನೀಡುವಂತಹ ಅಂಶಗಳಾಗಿವೆ.

ಕೇವಲ ಪಾಠ ಬೋಧನೆಯಿಂದ ಅಲ್ಲದೆ ಈ ಎಲ್ಲಾ ಚಟುವಟಿಕೆಗಳ ಮೂಲಕ ಈ ಶಾಲೆಯು ಕೇವಲ ಆ ಗ್ರಾಮದಲ್ಲಷ್ಟೇ ಅಲ್ಲದೆ ಸುತ್ತಮುತ್ತಲ ಗ್ರಾಮದಿಂದಲೂ ಸಹ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ . ಬೇರೆ ಬೇರೆ ಊರುಗಳಿಂದ ಈ ಶಾಲೆಗೆ ಮಕ್ಕಳು ಬರಲು ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಲೆಯ ಹೊರಗೆ ನೈಸರ್ಗಿಕ ಕಲಿಕೆಯಾದರೆ ಶಾಲೆಯ ಒಳಗೆ ಸ್ಮಾರ್ಟ್ ಕ್ಲಾಸ್, ಆಂಪಿ ಥಿಯೇಟರ್, ಕಂಪ್ಯೂಟರ್ ಗಳ ಮೂಲಕ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ.

ಇಲ್ಲಿಯ ಮಕ್ಕಳು ಸರಾಗವಾಗಿ ಓದುತ್ತಾರೆ. ದುಂಡಾಗಿ ಬರೆಯುತ್ತಾರೆ. ಶ್ಲೋಕಗಳು, ಕಥೆ, ಹಾಡು, ಗೀತಾ ಪಠಣ, ನಾಟಕಗಳು, ಕರಕುಶಲ ವಸ್ತುಗಳ ತಯಾರಿಕೆ, ಶಾಲಾ ಸಮಾರಂಭಗಳನ್ನು ನಿಭಾಯಿಸಬಲ್ಲ ಉತ್ತಮ ಮಾತುಗಾರಿಕೆ ಹೀಗೆ ಎಲ್ಲದರಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ. ಉತ್ತಮ ಇಂಗ್ಲಿಷ್ ಕಲಿಕೆಗಾಗಿ ಸ್ಪೋಕನ್ ಇಂಗ್ಲೀಷ್ ವ್ಯವಸ್ಥೆಯನ್ನು ಕೂಡ ಇಲ್ಲಿ ಮಾಡಲಾಗಿದೆ. ಸರ್ಕಾರಿ ಶಾಲೆಯಾಗಿರುವುದರಿಂದ ದಾನಿಗಳ ನೆರವನ್ನು ಸಹ ಯಥೇಚ್ಛವಾಗಿ ಪಡೆಯಲಾಗಿದೆ.

ಹಿರಿಯ ವಿದ್ಯಾರ್ಥಿಗಳ ಸಂಘ, ಹೊಂಬುಜ ಜೈನ ಮಠ, ಬೆಂಗಳೂರಿನ ಶ್ರೀಗಂಧ ಫೌಂಡೇಶನ್, ವಸುದೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್, ಜೆ.ಕೆ ಜೈನ್ ಫೌಂಡೇಶನ್, ವಾಗ್ದೇವಿ ಚಾರಿಟೇಬಲ್ ಟ್ರಸ್ಟ್ ತೀರ್ಥಹಳ್ಳಿ ಇನ್ನು ಕೆಲವು ಹೆಸರು ಹೇಳಲು ಬಯಸದ ದಾನಿಗಳಿಂದ ಸಹ ನೆರವನ್ನು ಪಡೆದು ಶಾಲೆಗೆ ಅಗತ್ಯವಾದಂತ ಎಲ್ಲಾ ಸೌಲಭ್ಯಗಳನ್ನು ಒದಗಿಸುವಲ್ಲಿ ರತ್ನಕುಮಾರಿಯವರೊಂದಿಗೆ ಅವರ ಸಹಶಿಕ್ಷಕರೂ ಇದಕ್ಕೆ ಸಾತ್ ನೀಡಿದ್ದಾರೆ.

ಸರ್ಕಾರಿ ಶಾಲೆಯನ್ನು ಉಳಿಸಬೇಕು, ಅಲ್ಲಿ ಕಲಿಯುವ ಮಕ್ಕಳ ಸಂಖ್ಯೆಯನ್ನು ವೃದ್ಧಿಸಬೇಕು, ಕಲಿಕಾ ವಾತಾವರಣವನ್ನು ಇನ್ನೂ ಆಕರ್ಷಕವಾಗಿ ನಿರ್ಮಿಸಬೇಕು ಎಂಬ ಭವಿಷ್ಯದ ಯೋಜನೆಗಳನ್ನು ಹೊಂದಿರುವ ಇವರ ಆಸೆ ಕನಸುಗಳೆಲ್ಲವೂ ಆದಷ್ಟು ಬೇಗ ಸಾಕಾರಗೊಳ್ಳಲಿ.

ಇವರ ಪತಿ ವಸಂತ್ ಎಸ್ ವಿ ಅವರು ತೀರ್ಥಹಳ್ಳಿ ತಾಲೂಕಿನ ಆರಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗಳು ಅವನಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.ನಿರ್ವಹಿಸುತ್ತಿದ್ದಾರೆ. ಮಗ ಅಕ್ಷರ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಈ ಅಮೋಘ ಸಾಧನೆಗೆ ಕುಟುಂಬದವರ ಸಂಪೂರ್ಣ ಸಹಕಾರ, ಬೆಂಬಲ ಸದಾ ಇವರೊಂದಿಗಿದೆ. ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ತುಂಬಿದೆ ಎನ್ನುತ್ತಾರೆ.

ತಮ್ಮ ಈ ಎಲ್ಲ ಸಾಧನೆಯ ಹಿಂದೆ ತಮ್ಮ ಪರಿಶ್ರಮವು ಎಷ್ಟಿದೆಯೋ ಅಷ್ಟೇ ಶಿಕ್ಷಕರ, ಗ್ರಾಮಸ್ಥರ, ಪೋಷಕರ, ಎಸ್ಡಿಎಂಸಿ ಅವರ, ದಾನಿಗಳ, ಇಲಾಖಾ ಅಧಿಕಾರಿಗಳ ಸಹಕಾರವೂ ಸಾಕಷ್ಟಿದೆ ಎಂದು ವಿನಮ್ರವಾಗಿ ಅವರಿಗೆ ಋಣಿಯಾಗಿದ್ದಾರೆ.

ನಾಳೆ (ಸೆ.05) ದೆಹಲಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ನಿಮಗೆ ನಾಡಿನ ಸಮಸ್ತ ಶಿಕ್ಷಕರ ಪರವಾಗಿ ಹಾರ್ದಿಕ ಅಭಿನಂದನೆಗಳು.

ಬರಹ : ದೀಪಾ ಕುಬಸದ್, ಅಧ್ಯಾಪಕಿ ಹಾಗೂ ಲೇಖಕಿ, ಸ.ಹಿ.ಪ್ರಾ.ಶಾಲೆ ಮುತ್ತಲ, ಹೊಸನಗರ ತಾಲೂಕು. ಮೊ: 9964561098
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]