HOSANAGARA | ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಹೆಚ್ಚಿಸುವ ಹಾಗೂ 2024-25ನೇ ಸಾಲಿನ ‘ಕೃಷಿಪ್ರಶಸ್ತಿ’ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಲುವಾಗಿ ಹೊಸನಗರ ತಾಲ್ಲೂಕಿನ ರೈತ ಬಾಂಧವರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಹೊಸನಗರ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾಗವಹಿಸಲಿಚ್ಚಿಸುವ ರೈತರು “ಭತ್ತದ ಬೆಳೆಯಲ್ಲಿ” ಎಲ್ಲಾ ಮಟ್ಟಗಳಿಗೂ ಅನ್ವಯವಾಗುವಂತೆ (ರಾಜ್ಯ/ ಜಿಲ್ಲಾ/ ತಾಲ್ಲೂಕು) ಏಕರೂಪದ ಅರ್ಜಿಯನ್ನು ಆನ್‌ಲೈನ್ ಮುಖಾಂತರ ಆ.31ರೊಳಗೆ ಸಲ್ಲಿಸಲು ಕೋರಿದೆ.
ಅರ್ಜಿ ಸಲ್ಲಿಸಲಿಚ್ಚಿಸುವ ರೈತರು ಕನಿಷ್ಠ ಒಂದು ಎಕರೆ ಭತ್ತವನ್ನು ಬೆಳೆಯುವ ರೈತನಾಗಿರಬೇಕು ಹಾಗೂ ಕಂದಾಯ ಇಲಾಖೆಯ ದಾಖಲೆ ಪ್ರಕಾರ ಖಾತೆ ಹೊಂದಿರುವ ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ಕೃಷಿಕನಾಗಿರಬೇಕು. ಸ್ವಂತ ಜಮೀನು ಹೊಂದಿರದಿದ್ದರೂ ಸಹ ಬೇಸಾಯದಲ್ಲಿ ತೊಡಗಿರುವ ಕೃಷಿಕರು ಜಮೀನು ಮಾಲಿಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರ (ಜಿಪಿಎ) ಹೊಂದಿದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ವಿಶೇಷ ಸೂಚನೆ :
ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿ ನೀಡಲು ಸರ್ಕಾರವು ಈ ಸಾಲಿನಿಂದ ನಿರ್ಧರಿಸಿದೆ. ಆದ್ದರಿಂದ ರೈತ ಮಹಿಳೆಯರು ಪ್ರಸ್ತುತ ಸಾಲಿನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.