ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹ ; ಗ್ರಾಮ ಆಡಳಿತ ಅಧಿಕಾರಿ ಸಂಘದಿಂದ ಅನಿರ್ದಿಷ್ಟ ಕಾಲ 2ನೇ ಹಂತದ ಮುಷ್ಕರ

Written by malnadtimes.com

Published on:

ಹೊಸನಗರ : ರಾಜ್ಯ ಕಾರ್ಯನಿರತ ಗ್ರಾಮ ಆಡಳಿತ ಅಧಿಕಾರಿಗಳ ವೃಂದಕ್ಕೆ ಮೂಲ ಸೌಲಭ್ಯ ನೀಡುವುದು, ತಾಂತ್ರಿಕ ಹುದ್ದೆಗೆ ಸರಿಸಮಾನ ವೇತನ, ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸುವುದು, ಕಂದಾಯ ಇಲಾಖೆಯ ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ರಚಿಸುವುದು, ಇ-ಪೌತಿ ಖಾತಾ ಆಂದೋಲನ ಕೈ ಬಿಡುವುದು, ಚಿಕ್ಕಮಗಳೂರು ಜಿಲ್ಲೆಯ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿ ತಡೆ ದಂಡನಾ ಆದೇಶವನ್ನು ಕೂಡಲೇ ಹಿಂಪಡೆಯುವುದು ಸೇರಿದಂತೆ ವಿವಿಧ ಹತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಎರಡನೇ ಹಂತದ ಅನಿರ್ದಿಷ್ಟ ಕಾಲದ ಮುಷ್ಕರಕ್ಕೆ ಸಿಬ್ಬಂದಿಗಳು ಮುಂದಾದರು.

WhatsApp Group Join Now
Telegram Group Join Now
Instagram Group Join Now

ಗ್ರಾಮ ಆಡಳಿತ ಅಧಿಕಾರಿ ಸಂಘದ ತಾಲೂಕು ಅಧ್ಯಕ್ಷ ನವೀನ್ ಮಾತನಾಡಿ, ಈ ಹಿಂದೆ ಸಂಘದ ಮೂಲಕ ಸಿಬ್ಬಂದಿಗಳ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರದ ವಿರುದ್ದ ಹಕ್ಕೊತ್ತಾಯ ನಡೆಸಿ, ಅಗತ್ಯ ಭರವಸೆ ಸಿಕ್ಕ ಹಿನ್ನಲೆಯಲ್ಲಿ ಮುಷ್ಕರ ತಾತ್ಕಾಲಿಕ ಕೈಬಿಡಲಾಗಿತ್ತು. ಆದರೆ, ಈ ಬಳಿಕ ಹಲವು ತಿಂಗಳೇ ಕಳೆದರೂ, ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಬೇಡೆಕೆಗಳ ಈಡೇರಿಕೆಗೆ ಮುಂದಾಗದಿರುವುದು ವಿಷಾದನೀಯ.ಈ ಕೂಡಲೇ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ತಪ್ಪಿದಲ್ಲಿ ನಮ್ಮ ಹೋರಾಟ ನಿರಂತರ ಎಂದು ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮುಂದಾದರು.

ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಡಿ ಸೋಮಶೇಖರ್, ಪ್ರತಿಭಟನಾಕಾರರ ಹೋರಾಟ ನ್ಯಾಯ ಸಮ್ಮತವಾಗಿದ್ದು, ಹೋರಾಟ ತೀವ್ರ ‌ಸ್ವರೂಪ ಪಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಳಬೇಕು ಎಂಬ ಎಚ್ಚರಿಕೆ ನೀಡಿದರು.

ಸಂಘದ ಖಜಾಂಚಿ ಗಣೇಶ್ ಮಾತನಾಡಿ, ತಾಲ್ಲೂಕಿನ ಒಟ್ಟು 30 ವೃತ್ತಗಳಲ್ಲಿ ಕೇವಲ 17 ಗ್ರಾಮ ಆಡಳಿತ ಸಿಬ್ಬಂದಿಗಳು ಬಹಳ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ಮೂಲಕ ಭರ್ತಿಗೆ ಮುಂದಾಗ ಬೇಕೆಂದು ಮನವಿ ಮಾಡಿದರು.‌ ಈ ವೇಳೆ ಕಾರ್ಯದರ್ಶಿ ಸಿದ್ದಪ್ಪ ಚೂರೇರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವು ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.

ಶಾಸಕ ಗೋಪಾಲಕೃಷ್ಣ ಬೇಳೂರು ಪರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್ ಮನವಿ ಸ್ವೀಕರಿಸಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.

Leave a Comment