RIPPONPETE ; ದೇವರ ಪೂಜೆ ಮತ್ತು ಜಿನಾಗಮೋಕ್ತ ಆರಾಧನೆ ಜೈನ ಧರ್ಮದ ಪ್ರಾಚೀನ ಸಂಪ್ರದಾಯವಾಗಿದೆ ಎಂದು ಶ್ರವಣಬೆಳಗೊಳ ಶ್ರೀಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮಿಗಳವರು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಆಯೋಜಿಸಲ್ಪಟ್ಟ ಇಂದ್ರಧ್ವಜ ಮಹಾಮಂಡಲ ವಿಧಾನ ಪೂಜಾ ದಿನದ 5ನೇ ದಿನದಂದು ತಿಳಿಸಿದರು.

ಪ್ರಪ್ರಥಮ ಬಾರಿಗೆ ಏರ್ಪಡಿಸಿದ ಆರಾಧನೆಯಿಂದ ಸರ್ವರಿಗೂ ಕ್ಷೇಮವುಂಟಾಗಲಿ ಎಂದು ತಮ್ಮ ಪ್ರವಚನದಲ್ಲಿ ಹೇಳಿ ತ್ರಿಕರಣಪೂರ್ವಕ ಆರಾಧನೆಯೇ ಭಕ್ತಿ ಎಂದು ಧರ್ಮ ನಿಷ್ಠೆಯ ಬಗ್ಗೆ ವಿವರಿಸಿದರು. ಹೊಂಬುಜ ಶ್ರೀಗಳವರು ಶ್ರವಣಬೆಳಗೊಳ ಶ್ರೀಮಠದ ಪೂರ್ವ ಭಟ್ಟಾರಕರಾಗಿದ್ದ ಕರ್ಮಯೋಗಿ ಚಾರುಕೀರ್ತಿ ಮಹಾಸ್ವಾಮಿಗಳವರ ಸ್ಮರಣೆ ಮಾಡುತ್ತಾ, ಅಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಅವರಿಂದ ದೀಕ್ಷಿತರಾಗಿ, ಅಲ್ಪಸಮಯದಲ್ಲಿ ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹರು ಎಂದು ಶ್ರೀಗಳವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಪೂರ್ವಾಹ್ನ ಪುರಪ್ರವೇಶಗೈದ ಶ್ರವಣಬೆಳಗೊಳ ಶ್ರೀಗಳವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಹೊಂಬುಜ ವೃತ್ತದಿಂದ ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಮಂದಿರಕ್ಕೆ ಕರೆತರಲಾಯಿತು. ಹೊಂಬುಜ ಶ್ರೀಗಳು ಹೃದಯಸ್ಪರ್ಶಿಯಾಗಿ ಸ್ವಾಗತಿಸಿದರು.

ಸೋಂದಾ ಶ್ರೀಮಠ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಗಳವರು ಶುಭ ಪ್ರವೇಶದ ಸಂದರ್ಭ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ :
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಯಲ್ಲಿ 2023-24ನೇ ಸಾಲಿನಲ್ಲಿ ಅತ್ಯದಿಕ ಅಂಕ ಗಳಿಸಿರುವ ಶಿವಮೊಗ್ಗ ಜಿಲ್ಲೆಯ ಜೈನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೊಂಬುಜ ಶ್ರೀಗಳವರು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.

ಸೇವಾಕಾಂಕ್ಷಿಗಳಿಗೆ ಸನ್ಮಾನ :
ಹೊಂಬುಜ ಶ್ರೀಮಠದ ಸಂಪರ್ಕವಿದ್ದು ಸೇವೆ ಮಾಡುವ ಡಿ.ಆರ್. ಅಂಗಡಿ, ವರಂರ ಕ್ಷೇತ್ರದ ವ್ಯವಸ್ಥಾಪಕರಾಗಿದ್ದ ಯುವರಾಜ ಆರಿಗ, ಹೊಂಬುಜ ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ ಅವರಿಗೆ “ಸನ್ನಿಧಿ ಸೇವಾ ರತ್ನ” ಬಿರುದು ನೀಡಿ ಅಭಿನಂದಿಸಲಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.