ರಿಪ್ಪನ್‌ಪೇಟೆ: “ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಅತ್ಯಂತ ಮಹತ್ವಪೂರ್ಣವಾದದ್ದು. ಕನ್ನಡವು ಕೇವಲ ಮಾತೃಭಾಷೆಯಾದರೆ ಸಾಲದು, ಅದು ನಮ್ಮೆಲ್ಲರ ಹೃದಯ ಶ್ರೀಮಂತಿಕೆಯ ಭಾಷೆಯಾಗಬೇಕು. ಕನ್ನಡಿಗರು ತಮ್ಮ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಬಾರದು” ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಲ್. ರಾಜು ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, “ಕನ್ನಡಿಗರು ಜಗತ್ತಿನ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಕನ್ನಡದ ಅಸ್ಮಿತೆ ಹಾಗೂ ಸಂಸ್ಕೃತಿಯನ್ನು ಸದಾ ಕಾಪಾಡಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ ಆರ್.ಎಚ್. ಶ್ರೀನಿವಾಸ ಆಚಾರ್ ಮಾತನಾಡಿ, “ನಾಡು ಹರಿದು ಹಂಚಿಹೋಗಿದ್ದ ಸಂದರ್ಭದಲ್ಲಿ ಕನ್ನಡ ನುಡಿಯನ್ನು ಒಗ್ಗೂಡಿಸಿ, ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ತ್ಯಾಗ-ಬಲಿದಾನಗಳನ್ನು ನಾವಿಂದು ಸ್ಮರಿಸಬೇಕಿದೆ” ಎಂದರು.
ಸಮಾರಂಭದಲ್ಲಿ ಸಿಡಿಸಿ ನಿರ್ದೇಶಕರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

