ಹೊಸನಗರ

ಜಿ.ಪಂ. ಚುನಾವಣೆ: ಮಾರುತಿಪುರ ರಾಜಕಾರಣಕ್ಕೆ ಹೊಸ ತಿರುವು – ಟೆಕ್ಕಿ ಎಂಟ್ರಿಗೆ ಕಾದಿದೆಯಾ ಬಿಜೆಪಿ ಟಿಕೆಟ್?

ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಾರುತಿಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಯುವ ಮುಖಂಡ ಅಬ್ಬಿ ಕಿರಣ್ ಬಿ.ಇ. ಅವರ ಹೆಸರು ಮುಂಚೂಣಿಗೆ ಬಂದಿದೆ.

Abbi Kiran

ಹೊಸನಗರ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಾರುತಿಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಯುವ ಮುಖಂಡ ಅಬ್ಬಿ ಕಿರಣ್ ಬಿ.ಇ. ಅವರ ಹೆಸರು ಮುಂಚೂಣಿಗೆ ಬಂದಿದೆ. ತಾಂತ್ರಿಕ ಕ್ಷೇತ್ರದ ವೃತ್ತಿಪರ ಅನುಭವ, ಸುದೀರ್ಘ ರಾಜಕೀಯ ಸಂಘಟನಾ ಒಡನಾಟ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಹೊಂದಿರುವ ಅರಿವು ಅವರ ಪರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಹೆಚ್ಚಾಗಲು ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯ ಸಂಘಟನೆಯವರೆಗೆ ಪಯಣ

ಅಬ್ಬಿ ಕಿರಣ್ ಅವರ ಸಾರ್ವಜನಿಕ ಜೀವನದ ಪಯಣ ಆರಂಭವಾಗಿದ್ದು 2004ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮೂಲಕ. ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅವರು, ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಯುವ ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳಲ್ಲಿ ಸಂಘಟನೆ ಬಲಪಡಿಸುವುದು, ರಾಷ್ಟ್ರೀಯ ವಿಚಾರಗಳ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಭಾರತೀಯ ಜನತಾ ಪಾರ್ಟಿಯೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡರು. ಹೊಸನಗರ ಮಂಡಲ ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾದ ಸಾಮಾಜಿಕ ಜಾಲತಾಣ ಪ್ರಮುಖರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ತಾಂತ್ರಿಕ ಶಿಕ್ಷಣ ಮತ್ತು ಕಾರ್ಪೊರೇಟ್ ಅನುಭವ

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಪದವೀಧರರಾಗಿರುವ ಅಬ್ಬಿ ಕಿರಣ್, ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ತಾಂತ್ರಿಕ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಯೋಜನೆಗಳ ನಿರ್ವಹಣೆ, ಸಮಯಪಾಲನೆ, ತಂಡದ ಸಮನ್ವಯ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೃತ್ತಿಪರ ಅನುಭವವನ್ನು ಸ್ಥಳೀಯ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಜನರಿಗೆ ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ರೂಪಿಸುವುದು ಅವರ ಆಶಯವಾಗಿದೆ.

ಕೃಷಿ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ

ಕೃಷಿ ಹಿನ್ನೆಲೆಯಿಂದ ಬಂದಿರುವ ಅಬ್ಬಿ ಕಿರಣ್ ಅವರಿಗೆ ಮಲೆನಾಡಿನ ರೈತರ ಬದುಕು ಮತ್ತು ಕೃಷಿ ಕ್ಷೇತ್ರದ ಸವಾಲುಗಳ ಬಗ್ಗೆ ಅರಿವಿದೆ. ಅಡಿಕೆ, ಕಾಳುಮೆಣಸು, ಶುಂಠಿ ಹಾಗೂ ಅರಿಶಿನ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಮಾರುಕಟ್ಟೆ ದರಗಳ ಏರಿಳಿತ, ಕೃಷಿ ಕಾರ್ಮಿಕರ ಕೊರತೆ ಮತ್ತು ನೀರಾವರಿ ಸೌಲಭ್ಯಗಳ ಅಗತ್ಯತೆಗಳ ಬಗ್ಗೆ ಗಮನಹರಿಸಿದ್ದಾರೆ.

ರೈತರಿಗೆ ಕೇವಲ ಬೆಳೆ ಉತ್ಪಾದನೆಯ ಹಂತದಲ್ಲಿ ಮಾತ್ರವಲ್ಲದೆ, ಉತ್ಪನ್ನಗಳ ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಅಗತ್ಯ ನೆರವು ದೊರೆಯಬೇಕು ಎಂಬುದು ಅವರ ನಿಲುವಾಗಿದೆ.

ಜನಪ್ರತಿನಿಧಿ ಸ್ಥಾನವಿಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದನೆ

ಯಾವುದೇ ಜನಪ್ರತಿನಿಧಿ ಹುದ್ದೆಯಲ್ಲಿಲ್ಲದಿದ್ದರೂ ಮಾರುತಿಪುರ ಭಾಗದ ಹಲವು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಮತ್ತು ಮುಖಂಡರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಕುಡಿಯುವ ನೀರಿನ ಪೂರೈಕೆ ಹಾಗೂ ಮಲೆನಾಡಿನ ಕುಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವ ವಿಚಾರಗಳಲ್ಲಿ ಆಸಕ್ತಿ ವಹಿಸಿದ್ದಾರೆ.

ವಿಶೇಷವಾಗಿ ಡಿಜಿಟಲ್ ಸಂಪರ್ಕವು ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ, ಯುವಜನರ ಉದ್ಯೋಗಾವಕಾಶ ಹಾಗೂ ಸ್ಥಳೀಯ ವ್ಯಾಪಾರ ಚಟುವಟಿಕೆಗಳಿಗೆ ಅತ್ಯಗತ್ಯ ಎಂಬುದನ್ನು ಪ್ರತಿಪಾದಿಸುತ್ತಿದ್ದಾರೆ.

ಸಮಗ್ರ ಗ್ರಾಮೀಣ ಅಭಿವೃದ್ಧಿಯ ಗುರಿ

ಅಬ್ಬಿ ಕಿರಣ್ ಅವರ ಅಭಿವೃದ್ಧಿ ಪರಿಕಲ್ಪನೆ ರಸ್ತೆ, ಕುಡಿಯುವ ನೀರು ಮತ್ತು ಇತರ ಮೂಲಸೌಕರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಗುಣಮಟ್ಟದ ಶಿಕ್ಷಣ, ಸುಧಾರಿತ ಆರೋಗ್ಯ ಸೇವೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಯುವಜನರಿಗೆ ಕೌಶಲ್ಯ ತರಬೇತಿ, ಮಹಿಳೆಯರ ಸ್ವಾವಲಂಬನೆ ಹಾಗೂ ಗ್ರಾಮೀಣ ಉದ್ಯಮಶೀಲತೆಗೆ ಹೆಚ್ಚಿನ ಆದ್ಯತೆ ನೀಡುವ ಆಶಯ ಹೊಂದಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಾಯ

ಮಾರುತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಈ ಬಾರಿ ಸುಶಿಕ್ಷಿತ, ಯುವ ಹಾಗೂ ಸಂಘಟನಾ ಅನುಭವ ಹೊಂದಿರುವ ನಾಯಕತ್ವದ ಅಗತ್ಯವಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಯುವಜನರ ಉತ್ಸಾಹದೊಂದಿಗೆ ಹಿರಿಯರ ಅನುಭವ ಮತ್ತು ಮಾರ್ಗದರ್ಶನವನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯಬಲ್ಲ ನಾಯಕನಾಗಿ ಅಬ್ಬಿ ಕಿರಣ್ ಅವರನ್ನು ಬೆಂಬಲಿಗರು ಬಿಂಬಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಬ್ಬಿ ಕಿರಣ್ ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರಿಂದ ಕೇಳಿಬರುತ್ತಿದೆ. ಅಂತಿಮವಾಗಿ ಪಕ್ಷದ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ಮಾರುತಿಪುರ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]